ಮೃತ ರೈತನ ಕುಟುಂಬಕ್ಕೆ 15 ಲಕ್ಷ ರೂ. ಚೆಕ್ ಹಸ್ತಾಂತರ

28SPT5
Published on

ಸೋಮವಾರಪೇಟೆ: ಆ.25ರಂದು ಕಾಡಾನೆ ದಾಳಿಯಿಂದ ಮೃತಪಟ್ಟ ರೈತನ ಕುಟುಂಬದವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು 15 ಲಕ್ಷ ರೂ. ಚೆಕ್ ಅನ್ನು ವಿತರಿಸಿದರು.


ಸೋಮವಾರ ಸಂಜೆ ಶಾಸಕ ಡಾ.ಮಂತರ್‌ಗೌಡ ಅವರೊಂದಿಗೆ ಆಡಿನಾಡೂರು ಗ್ರಾಮಕ್ಕೆ ತೆರಳಿದ ಸಚಿವರು, ಮೃತ ಈರಪ್ಪ ಅವರ ಪತ್ನಿ ಹೇಮಾವತಿ ಅವರಿಗೆ ಸಾಂತ್ವನ ಹೇಳಿದರು.


ಕಾಡಾನೆಗಳು ನಿರಂತರವಾಗಿ ಹಾವಳಿ ಮಾಡುತ್ತಿವೆ. ಸಂಜೆ ಸಮಯದಲ್ಲಿ ಕೃಷಿ ಭೂಮಿಯಲ್ಲಿ ಇರುತ್ತವೆ. ಕೃಷಿ ಹಾನಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ. ಆಡಿನಾಡೂರು ಗ್ರಾಮದಲ್ಲೇ ಮೂವರು ರೈತರು ಕಾಡಾನೆ ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡರು.
ಮನುಷ್ಯ ಮೇಲೆ ದಾಳಿ ಮಾಡುವ ಕಾಡಾನೆಗಳನ್ನು ಗುರುತಿಸಿ, ಹಿಡಿದು ಸ್ಥಳಾಂತರ ಮಾಡಲು ಕೂಡಲೆ ಕ್ರಮಕೈಗೊಳ್ಳಬೇಕು ಎಂದು ಸಚಿವರು ಕೊಡಗು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ ಅವರಿಗೆ ಸೂಚಿಸಿದರು. ಕಾಡಾನೆಗಳ ನಿಯಂತ್ರಣಕ್ಕೆ ಯಾರ ಅನುಮತಿಯನ್ನು ಕಾಯುವುದು ಬೇಡ. ಅಧಿಕಾರಿಗಳು ಸ್ಥಳದಲ್ಲೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.


ಅರಣ್ಯ ಇಲಾಖೆ ಮತ್ತು ಸಾಮಾಜಿಕ ಅರಣ್ಯ ಇಲಾಖೆಯಿಂದ ಸುಮಾರು 2.3 ಕೋಟಿ ರೂ. ಗಳಷ್ಟು ಬೆಳೆಹಾನಿ ಪರಿಹಾರ ಹಣವನ್ನು ರೈತರಿಗೆ ವಿತರಿಸಿಲ್ಲ. ಕೂಡಲೆ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಶಾಸಕ ಡಾ.ಮಂತರ್‌ಗೌಡ ಡಿಸಿಎಫ್ ಅವರಿಗೆ ಸೂಚಿಸಿದರು. ಆರ್‌ಆರ್‌ಟಿ ಹಾಗು ಕಾಡಾನೆ ಟಾಸ್ಕ್‌ಫೋರ್ಸ್ ಸಿಬ್ಬಂದಿಗೆ ಮೂರು ತಿಂಗಳಿನಿಂದ ಸಂಬಳ ಆಗದಿರುವ ಬಗ್ಗೆ ಶಾಸಕರು ಮಾಹಿತಿ ಪಡೆದರು. ಸಮಸ್ಯೆ ಬಗೆಹರಿಸಲಾಗುವುದು ಎಂದು ಡಿಸಿಎಫ್ ಭರವಸೆ ನೀಡಿದರು.


ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಡಿವೈಎಸ್‌ಪಿ ಗಂಗಾಧರಪ್ಪ, ತಹಸೀಲ್ದಾರ್ ಎಸ್.ಎನ್.ನರಗುಂದ, ಎಸಿಎಫ್ ಗೋಪಾಲ್, ಇನ್ಸ್‌ಪೆಕ್ಟರ್ ರಾಮಚಂದ್ರನಾಯಕ್, ಆರ್.ಎಫ್.ಒ. ಚೇತನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಪ್ರಮುಖರಾದ ಎಸ್.ಎಂ.ಡಿಸಿಲ್ವಾ, ಬಿ.ಇ.ಜಯೇಂದ್ರ, ಕೆ.ಎ.ಯಾಕೂಬ್, ಚೇತನ್‌ಅ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net