ಮೂವರು ದರೋಡೆಕೋರರ ಬಂಧನ

10gkn1-a-
Published on

ಗೋಕರ್ಣ: ರಾಷ್ಟ್ರೀಯ ಹೆದ್ದಾರಿ 66ರ ಮೇಲಿನ ಬೆಟ್ಕುಳಿ ಬಳಿ ಲಾರಿ ತಡೆದು ದರೋಡೆಗೆ ಹೊಂಚು ಹಾಕುತ್ತಿದ್ದ ಮೂವರನ್ನು ಸೋಮವಾರ ಬೆಳಗಿನ ಜಾವ ಪೊಲೀಸರು ಬಂಧಿಸಿದ್ದಾರೆ.

ಇವರ ಜೊತೆಗಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಹಳೇ ಹುಬ್ಬಳ್ಳಿ ಆನಂದ ನಗರದ ಓಂಪ್ರಕಾಶ ಉಮೇಶ ಮಠದ, ಗುರುನಾಥ ನಗರದ ಪ್ರಕಾಶ ದೇವೇಂದ್ರಪ್ಪ ಹುಲಿಗಪ್ಪನವರ್, ಹಳೇ ಹುಬ್ಬಳ್ಳಿ ಆನಂದ ನಗರದ ರಾಕೇಶ ಹನುಮಂತಪ್ಪ ಭಜಂತ್ರಿ ಬಂಧಿತರು. ಹುಬ್ಬಳ್ಳಿ ಶಿವಶಂಕರ ಕಾಲನಿಯ ಗಣೇಶ ಮತ್ತು ಆನಂದ ನಗರದ ರಫೀಕ್ ಪರಾರಿಯಾಗಿದ್ದಾರೆ.

ಇವರಿಂದ ದರೋಡೆಗೆ ಬಳಸಿದ ಟೊಯೊಟಾ ಎಟಿಯೋಸ್ ಕಾರು, ನಗದು ಹಣ ಮತ್ತು ಲಾಂಗ್, ಮಚ್ಚು, ಕಬ್ಬಿಣದ ರಾಡ್, ಕಟಿಂಗ್ ಪ್ಲೇಯರ್, ಖಾರದ ಪುಡಿ ವಶಪಡಿಸಿಕೊಳ್ಳಲಾಗಿದೆ ಎಂದು ಪಿಎಸ್​ಐ ನವೀನ ನಾಯ್ಕ ತಿಳಿಸಿದ್ದಾರೆ. ಈ ಆರೋಪಿಗಳು ಯಲ್ಲಾಪುರ, ಅಂಕೋಲಾ, ಉಡುಪಿ, ಹುಬ್ಬಳ್ಳಿ, ಕೊಪ್ಪಳ, ಗದಗ, ವಿಜಯಪುರ ಮುಂತಾದೆಡೆ ಹೆದ್ದಾರಿಯಲ್ಲಿ ದರೋಡೆ, ವಾಹನ ಕಳ್ಳತನ ಸೇರಿ 20ಕ್ಕೂ ಹೆಚ್ಚಿನ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net