

ನಿಪ್ಪಾಣಿ: ವಾಳಕಿ ಗ್ರಾಮದ ಅಪ್ಪಾಸಾಬ ಭೀಮಾ ನಾಯಿಕ(64) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಖಡಕಲಾಟ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ವಾಳಕಿ ಗ್ರಾಮದ ಸಂತೋಷ ಪರಶುರಾಮ ನಾಯಿಕ(30), ಹೊಳೆಪ್ಪ ಅಲಿಯಾಸ್ ಬಚ್ಚನ ಮಾರುತಿ ಘಸ್ತಿ(23) ಮತ್ತು ಮಹೇಶ ಸುರೇಶ ಬೇರಡ(20) ಬಂಧಿತರು.
ಮೂವರೂ ಆರೋಪಿತರು ಅಪ್ಪಾಸಾಬ ಅವರನ್ನು ವಾಳಕಿ ಗ್ರಾಮದಿಂದ ಆ.10ರಂದು ಕಾರಿನಲ್ಲಿ ಫೋಂಡಾ ಘಾಟಕ್ಕೆ ಕರೆದುಕೊಂಡು ಹೋಗಿ ಅವರನ್ನು ಕೊಲೆ ಮಾಡಿ ಶವವನ್ನು ಘಾಟ್ ಕೆಳಗೆ ಎಸೆದು ಸಾಕ್ಷಿ ನಾಶ ಮಾಡಿದ್ದರು. ಈ ಮಾಹಿತಿಯನ್ನು ವಾಳಕಿ ಗ್ರಾಮದ ಕೆಂಪಣ್ಣ ನಾಯಿಕ ಇವರ ಮುಂದೆ ಆರೋಪಿ ಸಂತೋಷ ಪರಶುರಾಮ ನಾಯಿಕ ಮದ್ಯದ ನಶೆಯಲ್ಲಿ ಹೇಳಿದ್ದಾನೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸಾಕ್ಷ್ಯಗಳನ್ನು ಕಲೆ ಹಾಕಿದಾಗ ಮೂವರು ಸೇರಿ ಅಪ್ಪಾಸಾಬ ಅವರನ್ನು ಕೊಲೆ ಮಾಡಿದ್ದಾರೆ ಎಂಬ ಸತ್ಯಾಂಶ ಬೆಳಕಿಗೆ ಬಂದಿದೆ. ತಕ್ಷಣ ಮೂವರು ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ.
ತಂದೆ ಕಾಣೆಯಾಗಿದ್ದಾರೆ ಎಂದು ಪುತ್ರ ಕಾಕಾಸಾಹೇಬ ಅಪ್ಪಾಸಾಬ ನಾಯಿಕ ಸಮೀಪದ ಖಡಕಲಾಟ ಪೊಲೀಸ್ ಠಾಣೆಯಲ್ಲಿ ಆ.11ರಂದು ದೂರು ದಾಖಲಿಸಿದ್ದರು.
ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ಥಳೀಯ ಸಿಪಿಐ ಬಿ.ಎಸ್. ತಳವಾರ ನೇತೃತ್ವದಲ್ಲಿ ಖಡಕಲಾಟ ಠಾಣೆಯ ಪ್ರಭಾರಿ ಪಿಎಸ್‌ಐ ಬಿ.ಕೆ. ಪಾಟೀಲ, ಸ್ಥಳೀಯ ಗ್ರಾಮೀಣ ಪಿಎಸ್‌ಐ ಶಿವರಾಜ ನಾಯಿಕವಾಡಿ, ಬಿಸಿಪಿಎಸ್ ಪಿಎಸ್‌ಐ ರಮೇಶ ಪವಾರ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.