ಮೂವರು ಅಭ್ಯರ್ಥಿಗಳ ವಿರುದ್ಧ ದೂರು

16122020 VV HVR PG 02
Published on

ರಾಣೆಬೆನ್ನೂರ: ಗ್ರಾಪಂ ಚುನಾವಣೆ ಪಕ್ಷ ಆಧಾರಿತವಲ್ಲವಾದರೂ ರಾಷ್ಟ್ರೀಯ ಪಕ್ಷದ ಚಿಹ್ನೆ ಹಾಗೂ ನಾಯಕರ ಭಾವಚಿತ್ರಗಳನ್ನು ಕರಪತ್ರದಲ್ಲಿ ಮುದ್ರಿಸಿದ ಆರೋಪದಡಿ ತಾಲೂಕಿನ ಮುದೇನೂರ ಗ್ರಾಪಂಯ ಒಬ್ಬ ಮಹಿಳೆ ಸೇರಿ ಮೂವರು ಅಭ್ಯರ್ಥಿಗಳ ವಿರುದ್ಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುದೇನೂರ ಗ್ರಾಪಂನ 2ನೇ ವಾರ್ಡ್​ಗೆ ಸ್ಪರ್ಧಿಸಿರುವ ನಾಗರಾಜಯ್ಯ ಬಿಳಸನೂರಮಠ, ಫಕೀರಪ್ಪ ತೆರೆದಹಳ್ಳಿ, ರೇಖಾ ಜಲಮಾಲಣ್ಣನವರ ಎಂಬುವರ ವಿರುದ್ಧ ದೂರು ದಾಖಲಾಗಿದೆ.

ಗ್ರಾಪಂ ಚುನಾವಣೆಯಲ್ಲಿ ಯಾವುದೇ ಪಕ್ಷದ ಚಿಹ್ನೆ ಹಾಗೂ ನಾಯಕರ ಭಾವಚಿತ್ರ ಬಳಸಬಾರದು ಎಂದು ತಿಳಿದಿದ್ದರೂ ಕರಪತ್ರಗಳಲ್ಲಿ ಬಿಜೆಪಿ ಚಿಹ್ನೆ ಹಾಗೂ ನಾಯಕರ ಭಾವಚಿತ್ರಗಳನ್ನು ಮುದ್ರಿಸಿದ್ದರು. ಅಲ್ಲದೆ ಗ್ರಾಪಂ ಸಮೀಪದ ಮಾರ್ಗಸೂಚಿ ಫಲಕಗಳಿಗೆ ಅಂಟಿಸಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಆದ್ದರಿಂದ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಮುದೇನೂರ ಗ್ರಾಪಂ ಚುನಾವಣೆ ಸೆಕ್ಟರ್ ಅಧಿಕಾರಿ ಆರ್. ಕೃಷ್ಣಮೂರ್ತಿ ಹಲಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಭ್ಯರ್ಥಿಗಳು ಪಕ್ಷದ ಚಿಹ್ನೆ ಹಾಗೂ ನಾಯಕರ ಭಾವಚಿತ್ರ ಬಳಸುತ್ತಿರುವ ಕುರಿತು ಬುಧವಾರ ವಿಶೇಷ ವರದಿ ಪ್ರಕಟಿಸಲಾಗಿತ್ತು.

ಇವಿಎಂ ಬಗೆಗಿನ ನಕಾರಾತ್ಮಕ ಕಲ್ಪನೆ ನಿವಾರಿಸಿ

ಹಾವೇರಿ: ಅಭ್ಯರ್ಥಿಗಳಿಗೆ ಚುನಾವಣೆ ಪ್ರಕ್ರಿಯೆ ಕುರಿತು ಜಾಗೃತಿ ಮೂಡಿಸಬೇಕು. ಪ್ರತಿ ಬೂತ್​ವುಟ್ಟದಲ್ಲಿ ಚುನಾವಣೆ ಸಂದರ್ಭಗಳಲ್ಲಿ ಕೋವಿಡ್ ಸುರಕ್ಷತೆಯ ಮುನ್ನೆಚ್ಚರಿಕೆ ಕ್ರಮಗಳ ಅರಿವು ಮೂಡಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಮಹಮ್ಮದ ರೋಶನ್ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮತದಾರರ ನೋಂದಣಿ, ಮಾರ್ಪಾಡು, ಸೇರ್ಪಡೆ, ಸ್ಥಳ ಬದಲಾವಣೆ ಕುರಿತು ವಿಶೇಷ ಮತದಾರರ ಪರಿಷ್ಕರಣೆ ಕಾರ್ಯವನ್ನು ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದೆ. ಯುವ ಹಾಗೂ ಅಂಗವಿಕಲ ಮತದಾರರ ನೋಂದಣಿಗೆ ಹೆಚ್ಚಿನ ಗಮನ ಹರಿಸಬೇಕು. ಹೊಸದಾಗಿ ಹೆಸರು ಸೇರ್ಪಡೆಗಾಗಿ ನಮೂನೆ-6ರಲ್ಲಿ, ಹೆಸರು ಕಡಿಮೆಗೊಳಿಸಲು ನಮೂನೆ-7ರಲ್ಲಿ, ಹೆಸರು ಇತ್ಯಾದಿ ತಿದ್ದುಪಡಿ ಬಯಸಿದ್ದಲ್ಲಿ ನಮೂನೆ-8ರಲ್ಲಿ ಮತ್ತು ಹೆಸರು ವರ್ಗಾವಣೆ ಮಾಡಬೇಕಾದ್ದಲ್ಲಿ ನಮೂನೆ-8ಎ ರಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಂಬಂಧಪಟ್ಟ ಮತಗಟ್ಟೆ ಅಧಿಕಾರಿಗೆ ಸಲ್ಲಿಸಬೇಕು. ಡಿ. 17ರವರೆಗೆ ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ ಎಂದರು.

ಜ. 25ರಂದು ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುವುದು. ವಿಶೇಷವಾಗಿ ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ವ್ಯಕ್ತವಾಗುತ್ತಿರುವ ನಕಾರಾತ್ಮಕ ಕಲ್ಪನೆಗಳನ್ನು ಪ್ರಾಯೋಗಿಕವಾಗಿ ನಿವಾರಿಸಬೇಕು. ಇದರೊಂದಿಗೆ ನೋಟಾ ಮತದಾನದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಮತಗಟ್ಟೆಗಳಲ್ಲಿ ಕೋವಿಡ್ ನಿಯಮ ಪಾಲನೆ ಕಡ್ಡಾಯ. ಮತಗಟ್ಟೆಗಳಲ್ಲಿ ಮತದಾರರಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ವೃದ್ಧರು, ಅಂಗವಿಕಲರು, ಗರ್ಭಿಣಿಯರಿಗೆ ಆಸನದ ವ್ಯವಸ್ಥೆ ಸೇರಿ ಮೂಲಸೌಕರ್ಯಗಳ ವ್ಯವಸ್ಥೆ ಕೈಗೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net