

ಕಿಕ್ಕೇರಿ: ಜಿಲ್ಲೆಯ ಗಡಿ ಗ್ರಾಮವಾದ ಸಮೀಪದ ಚಿಕ್ಕಮಂದಗೆರೆ ಗ್ರಾಮವು ಮೂಲಸೌಕರ್ಯಗಳಿಂದ ವಂಚಿತವಾಗಿದೆ.
ಮಂದಗೆರೆ ಗ್ರಾಪಂಗೆ ಸೇರಿದ ಗ್ರಾಮದಲ್ಲಿ 150 ಮನೆಗಳಿದ್ದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಕೃಷಿ, ಹೈನುಗಾರಿಕೆ ಆಧಾರವಾಗಿರುವ ಗ್ರಾಮದಲ್ಲಿನ ರಸ್ತೆಗಳು ಬಹುತೇಕ ಗುಂಡಿ ಬಿದ್ದಿವೆ. ಸಣ್ಣ ಮಳೆಯಾದರೂ ಗ್ರಾಮದ ರಸ್ತೆಗಳು ಗುಂಡಿಮಯವಾಗಲಿವೆ.
ಒಳಚರಂಡಿ ಕಾಣದೆ ಗ್ರಾಮದಲ್ಲಿ ಹಗಲು ವೇಳೆಯೇ ಸೊಳ್ಳೆಗಳ ಕಾಟ ವಿಪರೀತವಾಗಿದೆ. ತ್ಯಾಜ್ಯ ಹಾಗೂ ಕೊಳಚೆ ನೀರು ಹರಿಯದೆ ಗ್ರಾಮದ ರಸ್ತೆಗಳಲ್ಲಿ ನಿಂತು ಗಬ್ಬು ನಾರುತ್ತಿದೆ. ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗಿಡಗಂಟಿಗಳು ಬೆಳೆದು ಕ್ರಿಮಿ ಕೀಟಗಳ ತಾಣವಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಉದಾಸೀನತೆ ತೋರಿ ಶುಚಿತ್ವಕ್ಕೆ ಗಮನಹರಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಸೊಳ್ಳೆಗಳ ಕಾಟದಿಂದ ವೃದ್ಧರು, ಮಕ್ಕಳು, ಬಾಣಂತಿಯರು ರೋಸಿ ಹೋಗಿದ್ದಾರೆ. ಮಳೆಗಾಲದಲ್ಲಿ ರಸ್ತೆಗಳು ಕೆಸರು ಗದ್ದೆಯಾಗಲಿವೆ. ನಿತ್ಯ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವುದೇ ತಲೆ ನೋವಾಗಿದೆ. ಗ್ರಾಮದ ಜನರು ಸೊಳ್ಳೆಗಳ ಕಾಟದಿಂದ ಬೇಸತ್ತು ಹೋಗಿದ್ದೇವೆ ಎನ್ನುತ್ತಾರೆ.
ಗ್ರಾಮ ಜಿಲ್ಲೆಯ ಗಡಿಗ್ರಾಮವಾಗಿದೆ. ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಸಮರ್ಪಕ ರಸ್ತೆ, ಒಳಚರಂಡಿ ಇಲ್ಲದೆ ಸಾಂಕ್ರಾಮಿಕ ರೋಗಗಳು ಕಾಡುವಂತಾಗಿದೆ.
ಭರತ್‌ಗೌಡ, ಗ್ರಾಮಸ್ಥ
ಗ್ರಾಮದ ರಸ್ತೆ, ಒಳಚರಂಡಿ ಅಭಿವೃದ್ಧಿಗೆ ಗ್ರಾಪಂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವರಿಕೆ ಮಾಡಲಾಗಿದೆ. ಅಧಿಕಾರಿಗಳ ನಿರ್ಲಕ್ಷೃದಿಂದ ಗ್ರಾಮ ಅಭಿವೃದ್ಧಿಯಿಂದ ವಂಚಿತವಾಗಿದೆ.
ಮಂಜೇಗೌಡ, ಗ್ರಾಪಂ ಸದಸ್ಯ ಚಿಕ್ಕಮಂದಗೆರೆ