ಮೂರ್ನಾಡು ಪಿಯು ಕಾಲೇಜು ತಂಡಕ್ಕೆ ಪ್ರಶಸ್ತಿ

16.npk-2
Published on

ನಾಪೋಕ್ಲು: ಸಮೀಪದ ಮೂರ್ನಾಡು ಪದವಿ ಪೂರ್ವ ಕಾಲೇಜು ವತಿಯಿಂದ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಂತರ ಕಾಲೇಜು ರಸಪ್ರಶ್ನೆ ಸ್ಪರ್ಧೆಯಲ್ಲಿ ಮೂರ್ನಾಡು ಪಿಯು ಕಾಲೇಜಿನ ತಂಡ ಪ್ರಶಸ್ತಿಯನ್ನು ಮುಗಿಸಿಕೊಂಡಿತು.

ಕಾಲೇಜಿನ ವಿದ್ಯಾರ್ಥಿಗಳಾದ ಸಿ.ಯು.ಯಶ್ವಿನ್ ಮತ್ತು ಸಿ .ಎಸ್.ಪ್ರಜ್ಞಾ ತಂಡಕ್ಕೆ ಕಾಫಿ ಬೆಳೆಗಾರರಾದ ನೆರವಂಡ ಜಯ ಮುತ್ತಪ್ಪ ಪ್ರಾಯೋಜಿಸಿದ 3000 ರೂ.ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.

ದ್ವಿತೀಯ ಸ್ಥಾನವನ್ನು ವಿದ್ಯಾನಿಕೇತನ ಪಿಯು ಕಾಲೇಜಿನ ಎಂ.ಹರಿಕೃಷ್ಣನ್ ಮತ್ತು ಜಿ.ಸಿ.ಕಾರ್ಯಪ್ಪ ಪಡೆದುಕೊಂಡರು. ಇವರಿಗೆ 2500 ರೂ.ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ದ್ವಿತೀಯ ಸ್ಥಾನವನ್ನು ಮಡಿಕೇರಿಯ ಸಂತ ಜೋಸೆಫ್ ಪಿಯು ಕಾಲೇಜಿನ ಕೆ.ಎಸ್.ಮಹಮ್ಮದ್ ರಜೀಮ್ ಹಾಗೂ ಎಂ.ನಿಹಾಲ್ ಪಡೆದುಕೊಂಡರು. ಇವರಿಗೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ಒಟ್ಟು 11 ತಂಡಗಳು ಪಾಲ್ಗೊಂಡಿದ್ದವು.

ಅಂತರ ಪ್ರೌಢಶಾಲಾ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿದ ದಾನಿ ನೆರವಂಡ ಜಯ ಮುತ್ತಪ್ಪ ಮಾತನಾಡಿ, ರಸಪ್ರಶ್ನೆ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಆಯೋಜಿಸಿರುವ ಕಾರ್ಯಕ್ರಮವಿದು, ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವನೆಯಿಂದ ಪಾಲ್ಗೊಳ್ಳಬೇಕು ಹಾಗೂ ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮೂರ್ನಾಡು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪೆಮ್ಮಡಿಯಂಡ ವೇಣು ಅಪ್ಪಣ್ಣ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ರಸಪ್ರಶ್ನೆ ಸ್ಪರ್ಧೆ ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಪಠ್ಯ ವಿಷಯದ ಜತೆಗೆ ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲೆ ದೇವಕಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮೂರ್ನಾಡು ಎಜುಕೇಷನ್ ಸೊಸೈಟಿಯ ಖಜಾಂಚಿ ಯತೀಶ್, ನಿರ್ದೇಶಕರಾದ ಪುದಿಯೊಕ್ಕಡ ಹರೀಶ್ ದೇವಯ್ಯ, ಕೆರೆಮನೆ ರಾಮಮೂರ್ತಿ, ಉಪನ್ಯಾಸಕರಾದ ರೋಹಿಣಿ, ಕುಮುದಾ, ಸರೋಜಿನಿ, ಕ್ವಿಜ್ ಮಾಸ್ಟರ್ ಸಿ.ಎಸ್.ಸುರೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net