ಮೂರು ವರ್ಷಗಳಿಂದ ಘೋಷಣೆಯಾಗದ ಪ್ರಶಸ್ತಿ...!!

bkt-25-1 (2)
ಬಾಗಲಕೋಟೆ ನಗರದ ಕಲಾಭವನದ ಆವರಣದಲ್ಲಿರುವ ಕರ್ನಾಟಕ ಬಯಲಾಟ ಅಕಾಡೆಮಿ
Published on

ಸಂತೋಷ ದೇಶಪಾಂಡೆ

ಬಾಗಲಕೋಟೆ: ಅಳವಿನ ಅಂಚಿನಲ್ಲಿರುವ ಬಯಲಾಟ ಕಲೆ ಉಳಿಸಿ ಬೆಳೆಸುವುದು ದೊಡ್ಡ ಸವಾಲ್. ಇಂತಹ ಸಂದರ್ಭದಲ್ಲಿ ಬಾಗಲಕೋಟೆಯಲ್ಲಿರುವ ರಾಜ್ಯದ ಏಕೈಕ ಕರ್ನಾಟಕ ಬಯಲಾಟ ಅಕಾಡೆಮಿ ಶಕ್ತಿ ಇಲ್ಲದಂತಾಗಿದೆ. ಕಳೆದ ಮೂರು ವರ್ಷಗಳಿಂದ ಪ್ರಶಸ್ತಿಗಳಿಂದ ಘೋಷಣೆ ಮಾಡಿಲ್ಲ. ಪ್ರತ್ಯೇಕ ಕಟ್ಟಡ, ಸಿಬ್ಬಂದಿಗಳ ಕೊರತೆಗೆ ಅಕ್ಷರಶಃ ನಲುಗಿ ಹೋಗಿದೆ...!!

ಕಲಾವಿದರ ಬಹುದಿನ ಒತ್ತಾಸೆ ಮೇರೆಗೆ ಯಕ್ಷಗಾನ ಅಕಾಡೆಮಿಯಿಂದ ಪ್ರತ್ಯೇಕಗೊಳಿಸಿ ೨೦೧೮ ರಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಸ್ಥಾಪಿಸಲಾಗಿತ್ತು. ಜಿಲ್ಲೆಯ ಬೀಳಗಿಯ ಶ್ರೀರಾಮ ಇಟ್ಟನ್ನವರ ಪ್ರಥಮ ಅಧ್ಯಕ್ಷರಾಗಿ ಅದೇ ವರ್ಷ ಜುಲೈನಲ್ಲಿ ಅಽಕಾರ ವಹಿಸಿಕೊಂಡಿದ್ದರು. ನಂತರ ಟಿ.ಬಿ.ಸೊಲಬಕ್ಕನವರ, ಅಜೀತ ಬಸ್ಸಾಪುರ ಅಧ್ಯಕ್ಷರಾಗಿದ್ದರು. ಹೊಸ ಸರ್ಕಾರ ೧.೫ ವರ್ಷವಾದರು ಅಧ್ಯಕ್ಷರು, ಆಡಳಿತ ನೇಮಕ ತಡವಾಗಿತ್ತು, ಇದೀಗ ಪರಿಪೂರ್ಣ ಆಡಳಿತ ಅಸ್ತಿತ್ವಕ್ಕೆ ಬಂದರು ಹಲವು ಪ್ರಕ್ರಿಯೆಗೆ ಕಾರ್ಮೋಡ ಆವರಿಸಿದೆ.

ಕಳೆದ ಮೂರು ವರ್ಷಗಳಿಂದ ಪ್ರಶಸ್ತಿ ನೀಡಿಲ್ಲ...

ರಾಜ್ಯದ ಬಯಲಾಟ ಕಲಾವಿದರಿಗೆ ಬಯಲಾಟ ಅಕಾಡೆಮಿಯಿಂದ ಪ್ರತಿ ವರ್ಷ ೧೦ ವಾರ್ಷಿಕ, ೫ ಗೌರವ ಪ್ರಶಸ್ತಿ ನೀಡಲಾಗುತ್ತದೆ. ವಾರ್ಷಿಕ ಪ್ರಶಸ್ತಿಗೆ ೨೫ ಸಾವಿರ ರೂ., ಗೌರವ ಪ್ರಶಸ್ತಿಗೆ ೫೦ ಸಾವಿರ ನಗದು ಪ್ರೋತ್ಸಾಹ ನೀಡಲಾಗುತ್ತದೆ. ೨೦೨೧-೨೨, ೨೦೨೨-೨೩, ೨೦೨೩-೨೪ ಸಾಲಿನ ಮೂರು ವರ್ಷದ ಪ್ರಶಸ್ತಿ ಬಾಕಿ ಉಳಿಸಿಕೊಂಡಿದೆ. ಸಕಾಲಕ್ಕೆ ಅಧ್ಯಕ್ಷರ ನೇಮಕಾತಿ, ಆಡಳಿತ ಮಂಡಳಿ ನೇಮಕಾತಿ ಆಗದ ಪರಿಣಾಮ ತೀವ್ರ ಸಮಸ್ಯೆ ಉಂಟಾಗಿದೆ. ಮೂರು, ನಾಲ್ಕು ದಶಕಗಳ ಕಾಲ ಬಯಲಾಟ ಕ್ಷೇತ್ರವನ್ನೆ ನಂಬಿ ಬದುಕಿದ ಕಲಾವಿದರು ತಮ್ಮಗೊಂದು ಗೌರವ, ಸತ್ಕಾರ ದೊರೆಯುತ್ತದೆ ಅಂತ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೇ ಇದಕ್ಕೆ ಮಹೂರ್ತವೇ ಕೂಡಿ ಬರುತ್ತಿಲ್ಲ. ಇದರಿಂದ ಕಲಾವಿದರು ದಿಕ್ಕು ತೋಚದಂತಾಗಿದೆ.

ನೀಡಬೇಕಿದೆ ಹೊಸ ಸ್ಪರ್ಶ...

ಯಕ್ಷಗಾನ ಅಕಾಡೆಮಿಯಿಂದ ಪ್ರತ್ಯೇಕಗೊಂಡು ಬಾಗಲಕೋಟೆಯಲ್ಲಿ ಪ್ರತ್ಯೇಕ ಅಕಾಡೆಮಿ ನೇಮಕವಾದರು ಮೂಲ ಸೌಕರ್ಯ ಇಲ್ಲದೆ ಬಳಲುತ್ತಿದೆ. ಪೂರ್ಣ ಪ್ರಮಾಣದಲ್ಲಿ ರಜಿಸ್ಟಾರ್, ಆಡಳಿತಽಕಾರಿ ಇಲ್ಲವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ರಜಿಸ್ಟಾರ ಹುದ್ದೆಗೆ ಪ್ರಭಾರವಾಗಿ ನಿಯೋಜಿಸಲಾಗಿದೆ. ಇನ್ನು ಪ್ರತ್ಯೇಕ ಕಟ್ಟಡವಿಲ್ಲ. ಕಲಾಭವನದಲ್ಲಿ ಒಂದು ಬೃಹತ್ ಕೊಠಡಿ ಮೀಸಲಿಡಲಾಗಿದೆ. ಅಲ್ಲದೆ ಕಂಪ್ಯೂಟರ್ ಆಪರೇಟರ್, ಡಾಲಾಯತ್ ಇಬ್ಬರು ಸಿಬ್ಬಂದಿಗಳು ಮಾತ್ರ ಇದ್ದು, ಹೆಚ್ಚುವರಿ ಸಿಬ್ಬಂದಿ ಆಗಬೇಕಿದೆ. ಮುಖ್ಯವಾಗಿ ಅಕಾಡೆಮಿಗೆ ನೇಮಕವಾಗುವ ಅಧ್ಯಕ್ಷರಿಗೆ ಇಲ್ಲಿ ಖಾಯಂ ಉಳಿದುಕೊಳ್ಳುವ ಹಾಗೇ ಮಾಡಬೇಕು. ನಿತ್ಯವು ಚಟುವಟಿಕೆ ನಡೆಸಲು ಹೆಚ್ಚುವರಿ ಅನುದಾನ, ಸಿಬ್ಬಂದಿ ನೀಡಿ ಹೊಸ ಸ್ಪರ್ಶ ನೀಡಬೇಕು ಅಂತ ಕಲಾವಿದರ ಆಶಯವಾಗಿದೆ. ಇಲ್ಲವಾದಲ್ಲಿ ಅಕಾಡೆಮಿ ಸ್ಥಾಪಿಸಿದಕ್ಕೂ ಸಾರ್ಥಕತೆ ಭಾವ ಇಲ್ಲದಂತಾಗುತ್ತದೆ.

=========

ಕೆ.ಆರ್.ದುರ್ಗಾದಾಸ ಅಕಾಡೆಮಿಗೆ ಹೊಸ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಸದಸ್ಯರನ್ನು ನೇಮಕ ಮಾಡಲಾಗಿದೆ. ವಿಜಯಪುರದಲ್ಲಿ ಪಾರಿಜಾತ ಸಮ್ಮೇಳನ, ಉತ್ತರ ಕನ್ನಡದಲ್ಲಿ ಗೊಂಬೆಯಾಟ, ಬೆಳಗಾವಿ ಜಿಲ್ಲೆಯಲ್ಲಿ ಸಣ್ಣಾಟ, ಕಲಬುರ್ಗಿಯಲ್ಲಿ ಕಲ್ಯಾಣ ಕರ್ನಾಟಕ ಬಯಲಾಟ ಕಾರ್ಯಕ್ರಮ ನಡೆದಿದೆ. ಆದರೇ ಉದ್ದೇಶಿತ ಯೋಜನೆಗಳಾದ ವಿಶ್ವ ವಿದ್ಯಾಲಯ, ಕಾಲೇಜುಗಳಲ್ಲಿ ಬಯಲಾಟ ತರಬೇತಿ, ಕಮ್ಮಟ, ಕಲಾ ಪ್ರಕಾರಗಳಾದ ದೊಡ್ಡಾಟ, ಸಣ್ಣಾಟ, ಶ್ರೀಕೃಷ್ಣಾ ಪಾರಿಜಾತ, ಸೂತ್ರ ಗೊಂಬೆಯಾಟದ ಬಗ್ಗೆ ಕೃತಿಗಳ ಸಂಪುಟ ರಚನೆ, ಕಲಾ ಪ್ರಕಾರಗಳ ದಾಖಲೀಕರಣ, ಕಲಾವಿದರಿಗೆ ಪ್ರಯೋಜಕತ್ವ ಕಾರ್ಯಕ್ರಮ ಸೇರಿದಂತೆ ಒಟ್ಟಾರೆ ಅಕಾಡೆಮಿಯ ಕಾರ್ಯಚಟುವಟಿಕ ಸಾಕಾರಗೊಳಿಸಲು ಅಣಿಯಾಗಬೇಕಿದೆ. ಹೀಗೆ ಸರ್ಕಾರ ದಿವ್ಯ ಮೌನ ವಹಿಸಿದಲ್ಲಿ ಬಯಲಾಟ ಅಕಾಡೆಮಿಯು ಜೀವವಿಲ್ಲದ ದೇಹದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net