ಮೂರು ದಿನದಿಂದ ವರುಣನ ಕಾಟ

8sdp5
Published on

ಕಾರವಾರ: ಜಿಲ್ಲೆಯಲ್ಲಿ ಸತತ ಮೂರನೇ ದಿನ ಮಳೆ ಸುರಿಯುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಗುರುವಾರ ರಾತ್ರಿಯಿಂದ ಶುಕ್ರವಾರ ಸಾಯಂಕಾಲದವರೆಗೂ ಎಲ್ಲ ತಾಲೂಕುಗಳಲ್ಲಿ ಆಗಾಗ ಮಳೆ ಬಿದ್ದಿದೆ. ಅಡಕೆ ಹಾಗೂ ಭತ್ತದ ಕೊಯ್ಲು ಮಾಡಿಕೊಂಡವರು ಅಕಾಲಿಕ ಮಳೆಯಿಂದ ಭಾರಿ ನಷ್ಟ ಅನುಭವಿಸುವ ಆತಂಕದಲ್ಲಿದ್ದಾರೆ.

ಶುಕ್ರವಾರ ಬೆಳಗಿನ ವರದಿಯಂತೆ ಜಿಲ್ಲೆಯಲ್ಲಿ ಸರಾಸರಿ 2.4 ಮಿಮೀ ಮಳೆಯಾಗಿದೆ. ಅಂಕೋಲಾದಲ್ಲಿ 2.4,ಭಟ್ಕಳದಲ್ಲಿ 14.8, ಹಳಿಯಾಳದಲ್ಲಿ 0.9, ಹೊನ್ನಾವರದಲ್ಲಿ 11.1, ಕಾರವಾರದಲ್ಲಿ 0.7 ಕುಮಟಾದಲ್ಲಿ 2.1, ಮುಂಡಗೋಡಿನಲ್ಲಿ 0.2,ಯಲ್ಲಾಪುರ ಹಾಗೂ ಸಿದ್ದಾಪುರದಲ್ಲಿ 0.5, ಶಿರಸಿಯಲ್ಲಿ 3, ಜೊಯಿಡಾದಲ್ಲಿ 1.3, ದಾಂಡೇಲಿಯಲ್ಲಿ 2.2 ಮಿಮೀ ಮಳೆಯಾಗಿದೆ.

ಗುರುವಾರ ರಾತ್ರಿ ಸುರಿದ ಮಳೆಗೆ ಭಟ್ಕಳದ ಹೆಬಳೆ ಗ್ರಾಮದ ತೆಂಗಿನಗುಂಡಿಯ ಚಿಕ್ಕಣ್ಣ ರಾಮ ಶೆಟ್ಟಿ ಅವರ ಮನೆಯ ಹಂಚಿನ ಮಾಡು ಕುಸಿದು ಹಾನಿಯಾಗಿದೆ.

ಧರೆಗುರುಳಿದ ವಿದ್ಯುತ್ ಕಂಬ
ಸಿದ್ದಾಪುರ:
ಮಳೆ ಹಾಗೂ ಗಾಳಿಗೆ ಬಿಳಗಿ ಹೆಸ್ಕಾಂ ಉಪವಿಭಾಗದ ಹಿರೇಕೈನಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಿರುವ ಕಂಬ ನೆಲಕ್ಕುರುಳಿದೆ. ಅಲ್ಲದೆ, ತಂತಿಯ ಮೇಲೆ ಗುರುವಾರ ಮರ ಬಿದ್ದಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ತಾಲೂಕಿನಲ್ಲಿ ಈಗಾಗಲೇ ಮಳೆ- ಗಾಳಿಯಿಂದ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಒಂದು ಟಿಸಿ ಹಾಳಾಗಿದೆ. ಶುಕ್ರವಾರ ಮಧ್ಯಾಹ್ನ ಕಾನಸೂರು ಸಮೀಪ 110 ಕೆವಿ ವಿದ್ಯುತ್ ತಂತಿ ತುಂಡಾಗಿ ತಾಲೂಕಿನಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸಂಪರ್ಕ ವ್ಯವಸ್ಥೆ ಸರಿಪಡಿಸುವ ಕೆಲಸ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net