ಮೂರು ತಿಂಗಳಾದರೂ ಸಲ್ಲಿಕೆಯಾಗದ ಉನ್ನತಾಧಿಕಾರಿ ಸಮಿತಿಯ ಅಧ್ಯಯನ ವರದಿ-ಹೈಕೋರ್ಟ್ ಗೆ  ಆಕ್ಷೇಪಣೆ

28KWR2
ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಸಂಬಂಧ ಕಳೆದ ಸೆ.28 ರಂದು ಕೇಂದ್ರ ಉನ್ನತಾಧಿಕಾರಿ ಸಮಿತಿ ಕಾರವಾರದಲ್ಲಿ ಸಾರ್ವಜನಿಕ ಅಹವಾಲು ಆಲಿಸಿತು. ಶಾಸಕಿ ರೂಪಾಲಿ ನಾಯ್ಕ ಸಮಿತಿಯ ಮುಂದೆ ತಮ್ಮ ಅಭಿಪ್ರಾಯ ಮಂಡಿಸಿದರು.
Published on

ವಿಜಯವಾಣಿ ಸುದ್ದಿಜಾಲ ಕಾರವಾರ

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಜಾರಿ ಸಂಬಂಧ ಕೇಂದ್ರ ವನ್ಯಜೀವಿ ಮಂಡಳಿಯಿಂದ ನೇಮಕವಾದ ಉನ್ನತಾಧಿಕಾರಿ ಸಮಿತಿಯು ಇದುವರೆಗೂ ಹೈಕೋರ್ಟ್ ಗೆ  ಅಧ್ಯಯನ ವರದಿ ನೀಡದ ಬಗ್ಗೆ  ಆಕ್ಷೇಪಣೆ ಸಲ್ಲಿಕೆಯಾಗಿದೆ.

ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿಯ ಪರವಾಗಿ ವಕೀಲ ರವೀಂದ್ರ ಜಿ.ಕೊಲ್ಲೆ ಅವರು ಸೋಮವಾರ ಹೈಕೋರ್ಟ್ ಗೆ  ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 *ಹಿನ್ನೆಲೆ:* 

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ವನ್ಯಜೀವಿ ಮಂಡಳಿ ನೀಡಿದ್ದ ಅನುಮತಿಯನ್ನು ರದ್ದು ಮಾಡುವಂತೆ ಪರಿಸರ ಸಂಘಟನೆಗಳು ಹೈಕೋರ್ಟ್ ಮೊರೆ ಹೋಗಿದ್ದವು. ವಿಚಾರಣೆ ನಡೆಸಿದ ಹೈಕೋರ್ಟ್ ವನ್ಯಜೀವಿ ಮಂಡಳಿಯ ಪರವಾನಗಿಗೆ ತಡೆಯಾಜ್ಞೆ ನೀಡಿತ್ತು. ಅದನ್ನು ಪ್ರಶ್ನಿಸಿ  ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿಯು ವಕೀಲ ರವೀಂದ್ರ ಜಿ.ಕೊಲ್ಲೆ ಅವರ ನೇತೃತ್ವದಲ್ಲಿ ಹೈಕೋರ್ಟ್ ಮೊರೆ ಹೋಗಿ, ತಡೆಯಾಜ್ಞೆ ತೆರವಿಗೆ ಮನವಿ ಮಾಡಿತ್ತು. ವಿಚಾರಣೆ ಕೈಗೊಂಡ ಹೈಕೋರ್ಟ್ ತಡೆಯಾಜ್ಞೆ ತೆರವು ಮಾಡಿ, ಉನ್ನತಾಧಿಕಾರಿ ಸಮಿತಿಯೊಂದನ್ನು ರಚಿಸಿ ಈ ಬಗ್ಗೆ ಅಧ್ಯಯನ  ನಡೆಸಿ ಕಾಲಮಿತಿಯಲ್ಲಿ ವರದಿ ನೀಡುವಂತೆ ಕೇಂದ್ರ ವನ್ಯಜೀವಿ ಮಂಡಳಿಗೆ ಸೂಚನೆ ನೀಡಿತ್ತು.  

ಅದರಂತೆ ಕೇಂದ್ರ ವನ್ಯಜೀವಿ ಮಂಡಳಿಯಿಂದ ನೇಮಕವಾದ ಅರಣ್ಯಾಧಿಕಾರಿಗಳು, ತಜ್ಞರಿರುವ ಸಮಿತಿಯು ಕಳೆದ ನವೆಂಬರ್ 28 ರಂದು ಉತ್ತರ ಕನ್ನಡ ಹಾಗೂ ಧಾರವಾಡದಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯ ಬಗ್ಗೆ  ಸಾರ್ವಜನಿಕ ಅಹವಾಲು ಆಲಿಸಿತ್ತು. ಯೋಜನಾ ಸ್ಥಳ ಪರಿಶೀಲನೆ ನಡೆಸಿತ್ತು. ಅರಣ್ಯ ಅಧಿಕಾರಿಗಳಿಂದ ಮಾಹಿತಿ ಪಡೆದಿತ್ತು. ಇವೆಲ್ಲ ನಡೆದು 3 ತಿಂಗಳು ಕಳೆದಿದೆ. ಹೈಕೋರ್ಟ್ ನೀಡಿದ್ದ ಗಡುವು ಮುಕ್ತಾಯವಾಗಿದ್ದರೂ ಸಮಿತಿಯು ಇದುವರೆಗೂ ವರದಿ ಸಲ್ಲಿಸಿಲ್ಲ .ಅದನ್ನು ಪ್ರಶ್ನಿಸಿ ರವೀಂದ್ರ ಜಿ.ಕೊಲ್ಲೆ ಆಕ್ಷೇಪಣೆ ಸಲ್ಲಿಸಿದ್ದಾರೆ.

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಜಾರಿಯಿಂದ ಉತ್ತರ ಕರ್ನಾಟಕ ಹಾಗೂ ಕರಾವಳಿಯ ಸಂಪರ್ಕ ಸುಲಭವಾಗಲಿದೆ. ವಾಣಿಜ್ಯ ವಹಿವಾಟುಗಳಿಗೆ ಅನುಕೂಲವಾಗಲಿದೆ. ಮುಖ್ಯವಾಗಿ ಉತ್ತರ ಕನ್ನಡದ ವಾಣಿಜ್ಯೋದ್ಯಮ, ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಆದರೆ, ಕೆಲವು ಢೋಂಗಿ ಪರಿಸರವಾದಿಗಳು ಯೋಜನೆಯ ಬಗ್ಗೆ ಇಲ್ಲಸಲ್ಲದ ಆಕ್ಷೇಪಣೆ ಸಲ್ಲಿಸುತ್ತಿದ್ದಾರೆ. ಜಿಲ್ಲೆಗೆ ರೈಲ್ವೆ ಯೋಜನೆ ತರುವ ನಿಟ್ಟಿನಲ್ಲಿ ಸಮಿತಿ ಹೋರಾಟ ನಡೆಸಿದೆ ಎಂದು ಜಾರ್ಜ್ ಫರ್ನಾಂಡಿಸ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net