ಮೂರು ಕ್ಷೇತ್ರಗಳಲ್ಲಿ ಬಿಎಸ್‌ವೈ ಪ್ರಚಾರ ಅಬ್ಬರ

Yediyurappa
ಬಿ.ಎಸ್.ವೈ.
Published on

ಬಾಗಲಕೋಟೆ: ಜಿಲ್ಲೆಯ ಬಾದಾಮಿ, ಜಮಖಂಡಿ, ಬೀಳಗಿ ಕ್ಷೇತ್ರಗಳಲ್ಲಿ ಮಾಜಿ ಸಿಎಂ ಬಿ.ಎಸ್.ವೈ. ಭಾನುವಾರ ಭರ್ಜರಿ ಮತಬೇಟೆ ನಡೆಸಿದರು.

ಬಾದಾಮಿ ಕ್ಷೇತ್ರದ ಕೆರೂರಲ್ಲಿ ಬಿಜೆಪಿ ಅಭ್ಯರ್ಥಿ ಶಾಂತಗೌಡ ಪಾಟೀಲ, ಜಮಖಂಡಿ ಕ್ಷೇತ್ರದ ಸಾವಳಗಿಯಲ್ಲಿ ಅಭ್ಯರ್ಥಿ ಜಗದೀಶ ಗುಡಗುಂಟಿ ಹಾಗೂ ಬೀಳಗಿಯಲ್ಲಿ ಅಭ್ಯರ್ಥಿ ಮುರುಗೇಶ ನಿರಾಣಿ ಪರವಾಗಿ ಮೂರು ಕಡೆಗೂ ಬೃಹತ್ ಸಭೆಗಳನ್ನು ನಡೆಸಿ ಮತಯಾಚನೆ ನಡೆಸಿದರು.

ಬಾದಾಮಿ ಹಾಗೂ ಬೀಳಗಿ ಕ್ಷೇತ್ರಗಳಲ್ಲಿ ಫಲಿತಾಂಶ ನಿರ್ಧರಿಸಬಲ್ಲ ವೀರಶೈವ ಲಿಂಗಾಯತ, ಪರಿಶಿಷ್ಟ ಪಂಗಡ ಹಾಗೂ ಹಾಲುಮತ ಸಮಾಜದ ಮತಬುಟ್ಟಿಯನ್ನು ಸೆಳೆಯುವ ನಿಟ್ಟಿನಲ್ಲಿ ಬಿಎಸ್‌ವೈ ತಮ್ಮ ಭಾಷಣವನ್ನು ಮೀಸಲಿಟ್ಟರು.
ಬಾದಾಮಿ ಕ್ಷೇತ್ರದ ಹಾಲಿ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕ್ಷೇತ್ರ ಬದಲಿಸಿದ್ದರ ಬಗ್ಗೆ ವ್ಯಂಗ್ಯ ಹಾಗೂ ಚುಚ್ಚು ಮಾತುಗಳಿಂದ ತಿವಿದರು.

ಬಾದಾಮಿ ಕ್ಷೇತ್ರಕ್ಕೆ ಬಂದು, ಇಲ್ಲಿ ತಿಂದು ಇಲ್ಲಿಯೇ ಸ್ಪರ್ಧೆ ಮಾಡದೇ ಜನರಿಗೆ ದ್ರೋಹ ಮಾಡಿ ವರುಣಾ ಕ್ಷೇತ್ರಕ್ಕೆ ಹೋಗಿದ್ದಾರೆ. ಇದಕ್ಕೆ ಇಲ್ಲಿನ ಜನರು ತಕ್ಕ ಪಾಠ ಕಲಿಸಬೇಕು. ಸೋಲುವ ಭೀತಿಯಿಂದ ಕ್ಷೇತ್ರ ಬದಲಾಯಿಸಿದ್ದಾರೆ. ಹೀಗಾಗಿ ಬಾದಾಮಿ ಕ್ಷೇತ್ರದಲ್ಲಿ ಶಾಂತಗೌಡ ಪಾಟೀಲ ಅವರನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಅವರಿಗೆ ಬುದ್ದಿಕಲಿಸಬೇಕು ಎಂದರು.

ನೀವು ಇಲ್ಲಿ ಶಾಂತಗೌಡರನ್ನು ಗೆಲ್ಲಿಸಲು ಜವಾಬ್ದಾರಿ ತೆಗೆದುಕೊಳ್ಳಿ, ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ. ವರುಣಾದಲ್ಲಿ ಒಂದು ಸಲ ಮಾತ್ರ ಪ್ರಚಾರಕ್ಕೆ ಬರುತ್ತೇನೆ ಎಂದಿದ್ದ ಸಿದ್ದರಾಮಯ್ಯ ಅವರಿಗೆ ಇದೀಗ ಕ್ಷೇತ್ರ ಬಿಟ್ಟು ಹೊರಗಡೆ ಹೋಗದಂತ ದುಸ್ಥಿತಿ ಬಂದಿದೆ ಲೇವಡಿ ಮಾಡಿದರು.
ಎಸ್ಟಿ ಸಮುದಾಯದ ಜನರು ಒಂದನ್ನು ತಿಳಿದುಕೊಳ್ಳಬೇಕು.

ಬಿಜೆಪಿ ಎಸ್ಟಿ ಸಮಾಜದ ಮಹಿಳೆಯನ್ನು ಈ ದೇಶದ ರಾಷ್ಟ್ರಪತಿಯನ್ನಾಗಿ ಮಾಡಿದ್ದೇವೆ. ಹಾಗೆಯೇ ಕಾಗಿನೆಲೆ ಕ್ಷೇತ್ರದ ಅಭಿವೃದ್ದಿಗೆ ನಾನು ಸಿಎಂ ಇದ್ದಾಗ ೫೦, ೬೦ ಕೋಟಿ ರೂ. ಖರ್ಚು ಮಾಡಿ ಅಭಿವೃದ್ದಿಪಡಿಸಿದ್ದೇನೆ. ಹಾಲುಮತ ಸಮಾಜದವರು ಅಲ್ಲಿಗೆ ಹೋಗಿ ಒಮ್ಮೆ ನೋಡಿಕೊಂಡು ಬನ್ನಿ ಎನ್ನುವ ಮೂಲಕ ಒಂದು ಕಡೆಗೆ ಎಸ್ಟಿ ಸಮುದಾಯ ಹಾಗೂ ಮತ್ತೊಂದು ಕಡೆಗೆ ಕುರುಬ ಸಮಾಜದ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದರು.
ಮುಂದುವರೆದು ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದಾರೆ. ಈ ಮಾತನ್ನು ಯಾವ ವೀರಶೈವ, ಲಿಂಗಾಯತರು ನಂಬಬಾರದು. ನಾನೇ ಸ್ವಯಂ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಬಿಜೆಪಿಯನ್ನು ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಓಡಾಟ ಮಾಡುತ್ತಿದ್ದೇನೆ ಎಂದರು.

ಇದೇ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೂ ಉತ್ತರಿಸಿದ ಬಿಎಸ್ ವೈ, ಮೋದಿ ಅವರಿಗೆ ನನ್ನ ಮೇಲೆ ಪ್ರೀತಿ, ವಿಶ್ವಾಸ ಅಪಾರವಾಗಿದೆ. ನನ್ನ ಹುಟ್ಟು ಹಬ್ಬದ ದಿನದಂದೆ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದರು. ಅದನ್ನು ನಾನು ಯಾವತ್ತೂ ಮರೆಯಲ್ಲ. ಸಾರ್ವಜನಿಕರ ಸಭೆಯಲ್ಲಿ ಅವರು ಯಾರ ಹೆಸರನ್ನು ಹೇಳಲ್ಲ. ಹಾಗೆಯೇ ನನ್ನ ಹೆಸರನ್ನು ಹೇಳಿಲ್ಲ. ನನ್ನ ಬಗ್ಗೆ ಅವರಿಗೆ ಅವರ ಬಗ್ಗೆ ನನಗೆ ಪ್ರೀತಿ, ವಿಶ್ವಾಸ ಸ್ವಲ್ಪವೂ ಕಡಿಮೆ ಆಗಿಲ್ಲ ಎಂದು ಹೇಳಿದರು.
ವೀರೇಂದ್ರ ಪಾಟೀಲ ಅವರನ್ನು ವಿಮಾನ ನಿಲ್ದಾಣಕ್ಕೆ ಹೋಗಿ ಸಿಎಂ ಸ್ಥಾನದಿಂದ ರಾಜೀವ್ ಗಾಂಧಿ ಅವರು ಇಳಿಸಿದ್ದನ್ನು ಯಾರೂ ಮರೆತಿಲ್ಲ. ಇವತ್ತು ದೇಶದಲ್ಲಿ ನರೇಂದ್ರ ಮೋದಿ ಅಂತವರ ನಾಯಕತ್ವ ಇದೆ. ಅವರ ಎದುರು ರಾಹುಲï ಗಾಂಽ ಸಮನಾಗುತ್ತಾರಾ? ಎಲ್ಲಿಯ ಮೋದಿ ಎಲ್ಲಿಯ ರಾಹುಲ್ ಗಾಂಧಿ ಎಂದು ಪ್ರಶ್ನಿಸಿದ ಬಿಎಸ್‌ವೈ, ಬಾದಾಮಿಯಲ್ಲಿ ಶಾಂತಗೌಡ ಪಾಟೀಲ, ಬೀಳಗಿಯಲ್ಲಿ ಮುರುಗೇಶ ನಿರಾಣಿ ಹಾಗೂ ಜಮಖಂಡಿಯಲ್ಲಿ ಜಗದೀಶ ಗುಡಗುಂಟಿ ಅವರನ್ನು ಗೆಲ್ಲಿಸುವಂತೆ ಮತದಾರರಿಗೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net