ಮೂತ್ರ ವಿಸರ್ಜನೆಗೂ ಕಾಸು

FotoJet (5)
Published on

ಚಿಕ್ಕಬಳ್ಳಾಪುರ ನಗರಸಭೆ ಶೌಚಗೃಹಗಳಲ್ಲಿ ಜನರಿಂದ ಹಣ ಲೂಟಿ | ಜನಪ್ರತಿನಿಧಿಗಳು, ಅಧಿಕಾರಿಗಳ ಜಾಣಕುರುಡು | ನಗರದ ನೈರ್ಮಲ್ಯ ಕೆಡಿಸುತ್ತಿರುವ ಬಹಿರ್ದೆಸೆ

ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ

ಜಿಲ್ಲಾ ಕೇಂದ್ರದಲ್ಲಿರುವ ನಗರಸಭೆ ಸಾರ್ವಜನಿಕ ಶೌಚಗೃಹಗಳಲ್ಲಿ ಜನರಿಗೆ ಉಚಿತವಾಗಿ ಮೂತ್ರ ವಿಸರ್ಜನೆಗೆ ಅವಕಾಶ ನೀಡುವ ನಿಯಮ ಉಲ್ಲಂಘನೆಯಾಗುತ್ತಿದ್ದು, ರಾಜಾರೋಷವಾಗಿ ಹಣ ವಸೂಲಿ ಮಾಡಲಾಗುತ್ತಿದೆ.

ಹೌದು! ಪೈಪೋಟಿಯಲ್ಲಿ ದುಬಾರಿ ದರಕ್ಕೆ ಟೆಂಡರ್ ಪಡೆಯುವುದು, ಬಳಿಕ ನಿಯಮ ಬದಿಗೊತ್ತಿ ಜನರಿಂದ ಅನಧಿಕೃತ ಶುಲ್ಕ ಪಡೆಯುವುದು ರೂಢಿಯಾಗಿದೆ. ವಾಹನ ಪಾರ್ಕಿಂಗ್, ನೆಲಸುಂಕ, ಸಾರ್ವಜನಿಕ ಶೌಚಗೃಹಗಳ ಬಳಕೆಯ ಶುಲ್ಕ ಸೇರಿ ಬಹುತೇಕ ಶುಲ್ಕವು ದುಬಾರಿಯಾಗಿಯೇ ಇದೆ. ಇದನ್ನು ಪ್ರಶ್ನಿಸುವವರನ್ನು ಅವಾಚ್ಯವಾಗಿ ನಿಂದಿಸಿ, ಗಲಾಟೆ ಮಾಡಿ ಬೆದರಿಸುವ ಕೆಲಸವಾಗುತ್ತಿದೆ. ದೂರು ನೀಡಿದರೂ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಾರೆ.

ಬಯಲು ಬಹಿರ್ದೆಸೆಗೆ ಅವಕಾಶ

ಬಯಲು ಬಹಿರ್ದೆಸೆಗೆ ಕಡಿವಾಣ ಹಾಕಿ, ನಗರದ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಅಂಬೇಡ್ಕರ್ ಭವನ ಮುಂಭಾಗ, ನಗರಸಭೆ ಖಾಸಗಿ ಬಸ್ ನಿಲ್ದಾಣದ ಮಳಿಗೆ, ಸಾರಿಗೆ ಸಂಸ್ಥೆ ಬಸ್ ನಿಲ್ದಾಣ, ಸರ್ಕಾರಿ ಜೂನಿಯರ್ ಕಾಲೇಜು, ಸಂತೆ ಮೈದಾನ ಮಾರುಕಟ್ಟೆ, ಎಪಿಎಂಸಿ ಮಾರುಕಟ್ಟೆಯಲ್ಲಿ ಸಾರ್ವಜನಿಕ ಶೌಚಗೃಹಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ಮೂತ್ರ ವಿಸರ್ಜನೆ ಉಚಿತ. ಆದರೆ, ಇದರ ಪಾಲನೆಯಾಗುತ್ತಿಲ್ಲ. ಒಬ್ಬರಿಗೆ 3ರಿಂದ 5 ರೂ. ಪಡೆಯಲಾಗುತ್ತಿದೆ. ಹಾಗಾಗಿ ಬಹುತೇಕರು ಸಾರ್ವಜನಿಕ ಶೌಚಗೃಹಗಳ ಬಳಕೆಯಿಂದ ದೂರ ಉಳಿಯುತ್ತಿದ್ದು ಬಯಲು ಪ್ರದೇಶದಲ್ಲಿ ಮೂತ್ರ ವಿಸರ್ಜಿಸುತ್ತಿದ್ದಾರೆ. ಇದಕ್ಕೆ ನಗರದ ಪತ್ರಕರ್ತರ ಭವನ, ತಾಪಂ ಕಚೇರಿ ಹಿಂಭಾಗ, ಕನ್ನಡ ಕಲಾ ಭವನ, ರೈಲು ನಿಲ್ದಾಣ, ಜಿಲ್ಲಾ ಕೇಂದ್ರ ಗ್ರಂಥಾಲಯ ಮತ್ತಿತರ ಪ್ರದೇಶಗಳು ನೆಚ್ಚಿನ ತಾಣವಾಗಿದ್ದು, ನಗರದ ನೈರ್ಮಲ್ಯ ಹದಗೆಡುತ್ತಿದೆ. ದುರ್ವಾಸನೆಯಿಂದಾಗಿ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಈ ಸ್ಥಳಗಳಲ್ಲಿ ಸ್ವಚ್ಛ ಭಾರತ್ ಅಭಿಯಾನದ ಉದ್ದೇಶಕ್ಕೆ ವಿರುದ್ಧ ವಾತಾವರಣ ಸೃಷ್ಟಿಯಾಗುತ್ತಿದೆ.

ನಿಯಮಗಳೇ ಲೆಕ್ಕಕ್ಕಿಲ್ಲ

ಸಾರ್ವಜನಿಕ ಶೌಚಗೃಹಗಳಲ್ಲಿ ಕಡ್ಡಾಯವಾಗಿ ಉಚಿತ ಮೂತ್ರ ವಿಸರ್ಜನೆ ಬರಹದ ನಾಮಲಕ ಅಳವಡಿಸಿರಬೇಕು. ಅನಧಿಕೃತ ದರ ಪಡೆಯಬಾರದು. ಸ್ವಚ್ಛತೆ ಕಾಪಾಡಬೇಕು. ಆದರೆ, ಇದಾವುದನ್ನೂ ಪಾಲಿಸುತ್ತಿಲ್ಲ. ಕೇವಲ ಹಣ ವಸೂಲಿಯೇ ಉದ್ದೇಶವಾಗಿದೆ. ಇತ್ತೀಚೆಗೆ ಸೋಂಕು ಕಾಯಿಲೆಗಳ ಭಯದಿಂದಾಗಿ ಸಾರ್ವಜನಿಕ ಶೌಚಗೃಹಗಳನ್ನು ಬಳಸದಂತೆ ಅನೇಕ ವೈದ್ಯರು ಜನರಿಗೆ ಸಲಹೆ ನೀಡುತ್ತಿರುವುದು ಹೆಚ್ಚಾಗುತ್ತಿದೆ. ಇದರ ಅರಿವಿದ್ದರೂ ಸ್ವಚ್ಛತೆಯನ್ನು ಕಡೆಗಣಿಸಲಾಗುತ್ತಿದೆ.

ಜನಪ್ರತಿನಿಧಿಗಳ ಹಸ್ತಕ್ಷೇಪ

ಟೆಂಡರ್ ಕೊಡಿಸುವುದರಲ್ಲಿ ನಗರಸಭೆಯ ಕೆಲ ಸದಸ್ಯರು ಮತ್ತು ಅಧಿಕಾರಿಗಳು ನಿಯಮ ಉಲ್ಲಂಘನೆಗೆ ಅವಕಾಶ ಕೊಡುತ್ತಿರುವುದೇ ಅಕ್ರಮಗಳಿಗೆ ಪ್ರಮುಖ ಕಾರಣವಾಗಿದೆ. ಸಾಮಾನ್ಯ ಸಭೆಗಳಲ್ಲಿ ಬೆಂಬಲಿಗರಿಗೆ ಟೆಂಡರ್ ಕೊಡಿಸಲು ನಿಯಮಗಳ ಸರಳೀಕರಣಕ್ಕೆ ಒತ್ತಾಯ, ವಿವಿಧ ಕೆಲಸಗಳ ನೆಪದಲ್ಲಿ ಅನುದಾನ ಮಂಜೂರಾತಿ, ಅಧಿಕಾರಿಗಳು ಪರಿಶೀಲನೆಯ ವೇಳೆ ತಟಸ್ಥ ಧೋರಣೆ ಅನುಸರಿಸಲು ಒತ್ತಡ ಸೇರಿದಂತೆ ವಿವಿಧ ರೀತಿಯಲ್ಲಿ ಹಸ್ತಕ್ಷೇಪ ಮಾಡಲಾಗುತ್ತಿದೆ. ಹಿಂದಿನ ನಗರಸಭೆ ಅಧ್ಯಕ್ಷರೊಬ್ಬರು ಸಂಬಂಧಿಕರೊಬ್ಬರಿಗೆ ಶೌಚಗೃಹ ಟೆಂಡರ್ ಕೊಡಿಸುವಲ್ಲಿ ಅನುಕೂಲಕರ ಮಾರ್ಗ ಅನುಸರಿಸಿ, ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವುದರ ಬಗ್ಗೆ ಅನೇಕ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.

ಶೌಚಗೃಹ ಶುಲ್ಕ

* ಶೌಚಗೃಹ ಬಳಕೆ ಶುಲ್ಕ: 5 ರೂ

* ಮೂತ್ರ ವಿಸರ್ಜನೆ ಶುಲ್ಕ: ಉಚಿತ

ಟೆಂಡರ್ ನಿಯಮ

* ಶೌಚಗೃಹದಲ್ಲಿ ಸ್ವಚ್ಛತೆ ನಿರ್ವಹಣೆ

* ಕಟ್ಟಡ ಹಾನಿಗೊಳಿಸಬಾರದು

* ಉಪಗುತ್ತಿಗೆ ನೀಡುವಂತಿಲ್ಲ

* ಅನಧಿಕೃತ ಶುಲ್ಕ ವಸೂಲಿ ಮಾಡಬಾರದು

ಸರ್ಕಾರಿ ಸಾರ್ವಜನಿಕ ಶೌಚಗೃಹಗಳಲ್ಲಿ ಸರಿಯಾಗಿ ಕಾಣುವಂತೆ ಉಚಿತ ಮೂತ್ರ ವಿಸರ್ಜನೆಯ ಮಾಹಿತಿ ಲಕ ಅಳವಡಿಸಿಲ್ಲ. ಪ್ರತಿಯೊಬ್ಬರಿಂದಲೂ ಬೆದರಿಸಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದರಿಂದ ಬಯಲು ಬಹಿರ್ದೆಸೆ ಹೆಚ್ಚಾಗಿದೆ. ನಗರಸಭೆ ಖಾಸಗಿ ಬಸ್ ನಿಲ್ದಾಣದ ಕಟ್ಟಡದ ಮೇಲೆ ಮೂತ್ರ ವಿಸರ್ಜಿಸುವಂತಹ ದುಸ್ಥಿತಿ ತಲುಪಿದ್ದು, ಇದಕ್ಕೆ ಅಧಿಕಾರಿಗಳ ಅಸಡ್ಡೆ ಧೋರಣೆ ಪ್ರಮುಖ ಕಾರಣ. - ಹೆಸರು ಹೇಳಲು ಇಚ್ಛಿಸದ ವ್ಯಾಪಾರಿ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net