

ಕಲಬುರಗಿ: ಮೂಢನಂಬಿಕೆ ಬಿಟ್ಟು ಸುತ್ತಮುತ್ತಲಿನ ಪರಿಸರ ಸ್ವಚ್ಛತೆಗೆ ಪ್ರತಿಯೊಬ್ಬರೂ ಹೆಚ್ಚಿನ ಗಮನ ಕೊಡಬೇಕು ಎಂದು ನಿವೃತ್ತ ಉಪನ್ಯಾಸಕ ಡಾ.ಪ್ರಭು ಖಾನಾಪುರೆ ಹೇಳಿದರು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕೇಂದ್ರ ಸಂವಹನ ಇಲಾಖೆ ಹಾಗೂ ಕಲಬುರಗಿಯ ಸರ್ಕಾರಿ ಪುರುಷ ಐ.ಟಿ.ಐ. ಸಂಸ್ಥೆ ಸಹಯೋಗದಲ್ಲಿ ಸ್ವಚ್ಚ ಭಾರತ ಸ್ವಚ್ಛತೆಯೇ ಸೇವೆ, ಪ್ಲಾಸ್ಟಿಕ್ ಮುಕ್ತ ಪರಿಸರ ಹಾಗೂ ಪಿಎಂ ವಿಶ್ವಕರ್ಮ ಯೋಜನೆಯ ವಿಶೇಷ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಯುವಕರು ಶೈಕ್ಷಣಿಕ ಚಟುವಟಿಕೆ ಜತೆಗೆ ಪರಿಸರ ಸಂರಕ್ಷಣೆ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಪರಿಸರ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಶ್ರಮಿಸಬೇಕು. ಪ್ಲಾಸ್ಟಿಕ್ ಮುಕ್ತ ಜೀವನ, ವಾಯು ಮಾಲಿನ್ಯ ಮುಕ್ತ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪಣತೊಡಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮುರಳೀಧರ ರತ್ನಗಿರಿ ಮಾತನಾಡಿ, ಸಂಸ್ಥೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ನಿರಂತರವಾಗಿ ಸ್ವಚ್ಛತೆ, ಪರಿಸರ, ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣ ನಿಟ್ಟಿನಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ವಿಠ್ಠಲರಾವ್ ಕುಲಕರ್ಣಿ ಮಾತನಾಡಿದರು. ಲೋಹಿಯಾ ಕಲಾ ತಂಡದ ಮುಖ್ಯಸ್ಥ ಪ್ರಭುಲಿಂಗ ಕಿಣಗಿ ಹಾಗೂ ಸಂಗಡಿಗರು ಪ್ಲಾಸ್ಟಿಕ್ ಮುಕ್ತ ಪರಿಸರದ ಗೀತೆಗಳನ್ನು ಪ್ರಸ್ತುತಪಡಿಸಿದರು.
ಉದ್ಯೋಗ ಮತ್ತು ತರಬೇತಿ ಇಲಾಖೆಯ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ರವೀಂದ್ರನಾಥ ಬಾಳಿ, ಐಟಿಐ ಸಂಸ್ಥೆಯ ಆಡಳಿತಾಧಿಕಾರಿ ಸುರೇಶ ವಗ್ಗೆ, ತರಬೇತಿ ಅಧಿಕಾರಿ ಸಿದ್ರಾಮಪ್ಪ ಡೋಣಿ, ಕೇಂದ್ರ ಸಂವಹನ ಇಲಾಖೆಯ ಅಧಿಕಾರಿ ನಾಗಪ್ಪ ಅಂಬಾಗೋಳ, ಕಿರಿಯ ತರಬೇತಿ ಅಧಿಕಾರಿ ಸತೀಶ್ ಸಜ್ಜನ್ ಇತರರಿದ್ದರು. ಭಾರತಿ ಸ್ವಾಗತಿಸಿದರೆ, ಬಸನಗೌಡ ಪಾಟೀಲ್ ನಿರೂಪಿಸಿದರು. ರೇವಣಕುಮಾರ್ ವಂದಿಸಿದರು.