

ಬ್ಯಾಡಗಿ: ಜೋಳಿಗೆ ಮೂಲಕ ಧಾನ್ಯ, ದೇಣಿಗೆ ಸಂಗ್ರಹಿಸಿ ಲಕ್ಷಾಂತರ ಭಕ್ತರಿಗೆ ತ್ರಿವಿಧ ದಾಸೋಹ ನೆರವೇರಿಸುವ ಮೂಲಕ ನಡೆದಾಡುವ ದೇವರೆಂದೇ ಪ್ರಸಿದ್ಧಿಯಾಗಿರುವ ಮೂಕಪ್ಪ ಶ್ರೀಗಳು ಕಾಯಕ ತತ್ವ, ಧಾರ್ವಿುಕ ಪರಂಪರೆಯಲ್ಲಿ ಮಹತ್ವದ ಸ್ಥಾನ ಪಡೆದಿದ್ದಾರೆ ಎಂದು ಮುಪ್ಪಿನಸ್ವಾಮಿ ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಸ್ಥಳೀಯ ಮುಪ್ಪಿನಸ್ವಾಮಿ ಮಠದಲ್ಲಿ ಶ್ರಾವಣಮಾಸದ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಧಾರ್ವಿುಕ ಪೂಜಾ ಕಾರ್ಯಕ್ರಮದಲ್ಲಿ ಗುಡ್ಡದಮಲ್ಲಾಪುರ ಷ.ಬ್ರ. ಮೂಕಪ್ಪಸ್ವಾಮಿಗಳ ದರ್ಶನ ಹಾಗೂ ವಿಶೇಷ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಬೇಡಿ ತಂದ ದವಸ, ಧಾನ್ಯಗಳು, ಭಿಕ್ಷೆಯ ಕಾಣಿಕೆಯಲ್ಲಿ ಭಕ್ತರನ್ನು ಸಂತೃಪ್ತಿ ಪಡಿಸುವ ಮಹಾ ದಾಸೋಹಿ ಗುಡ್ಡದಮಲ್ಲಾಪುರ ಷ.ಬ್ರ. ಮೂಕಪ್ಪಸ್ವಾಮಿಗಳ ಧರ್ಮ ಕಾಯಕ ವಿಶಿಷ್ಟ ಪರಂಪರೆಗಳಲ್ಲಿ ಒಂದಾಗಿದೆ. ನಾಡಿನಾದ್ಯಂತ ಸಮಸ್ತ ಭಕ್ತರ ಉದ್ಧಾರಕ್ಕಾಗಿ ಶ್ರಮಿಸುತ್ತಿರುವ ದೇಶ ಸಂಚಾರಿ ಷ.ಬ್ರ. ಮೂಕಪ್ಪಸ್ವಾಮಿಗಳು ತ್ರಿವಿಧ ದಾಸೋಹಿ ಎನಿಸಿದ್ದಾರೆ. ಶ್ರೀಗಳ ಕಾಯಕ ಮಾನವ ರೂಪದ ಮಠಾಧೀಶರಿಗಿಂತ ಭಿನ್ನವಾಗಿದೆ. ವೃಷಭರೂಪಿ ಮೂಕಪ್ಪ ಶಿವಯೋಗಿಗಳು ನಿತ್ಯ ಭಕ್ತರ ಮನೆಗೆ ತೆರಳುತ್ತ, ಪಾದಪೂಜೆಯೊಂದಿಗೆ ಭಕ್ತರಿಗೆ ಆಶೀರ್ವದಿಸಿ ಹರಸುತ್ತಿದ್ದಾರೆ. ಶ್ರೀಮಠದಲ್ಲಿ ಗೋಶಾಲೆ ಹಾಗೂ ನೂರಾರು ನಿರ್ಗತಿಕ ಮಕ್ಕಳಿಗೆ ಜ್ಞಾನ ದಾಸೋಹ ಸೇವೆ ಮಹತ್ವದ್ದಾಗಿದೆ. ಶ್ರೀಗಳು ರಾಜ್ಯ, ಹೊರರಾಜ್ಯಗಳಲ್ಲಿ ಭಕ್ತರನ್ನು ಹೊಂದಿದ್ದು, ಸುಕ್ಷೇತ್ರ ಗುಡ್ಡದಮಲ್ಲಾಪುರ ದಾಸೋಹಮಠಕ್ಕೆ ಭಕ್ತರು ನಿತ್ಯ ಆಗಮಿಸುತ್ತಿರುವುದು ವಿಶೇಷವಾಗಿದೆ ಎಂದರು.
ಇದಕ್ಕೂ ಮುನ್ನ ಮೂಕಪ್ಪ ಶ್ರೀಗಳನ್ನು ಭಕ್ತರು ಮನೆಮನೆಗೂ ಕರೆದೊಯ್ದು ಪಾದಪೂಜೆ ನಡೆಸಿದರು. ಇಲ್ಲಿನ ಕುಮಾರೇಶ್ವರ ಪಾಠಶಾಲೆಯ ಜಂಗಮವಟುಗಳು ಪೂಜಾ ಕಾರ್ಯಕ್ರಮವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಾಯಿಮಂದಿರ ಧರ್ಮಾಧಿಕಾರಿ ವೇ. ಮಂಜಯಸ್ವಾಮಿ ಹಿರೇಮಠ, ಪುರಸಭೆ ಮಾಜಿ ಅಧ್ಯಕ್ಷ ದಾನಪ್ಪ ಮಾಸೂರು, ಸದಸ್ಯ ಚಂದ್ರಪ್ಪ ಶೆಟ್ಟರ್, ಪ್ರಶಾಂತ ಯಾದವಾಡ, ವೀರಕನ್ನಡಿಗ ರಕ್ಷಣಾ ವೇದಿಕೆ ಅಧ್ಯಕ್ಷ ಚನ್ನಬಸಪ್ಪ ಶೆಟ್ಟರ್, ಮುತ್ತಣ್ಣ ಕೆಂಬಿ, ಬಸಣ್ಣ ಮೇಲ್ಮುರಿ, ಕಸಾಪ ತಾಲೂಕು ಅಧ್ಯಕ್ಷ ಬಿ.ಎಂ. ಜಗಾಪುರ, ಮಹಾಲಿಂಗಪ್ಪ ಶಿರೂರು, ಮಂಗಳಾ ಸಾತೇನಹಳ್ಳಿ, ಉತ್ಸವ ಸಮಿತಿ ಸದಸ್ಯ ಚೆನ್ನಪ್ಪ ಚನ್ನರಾಯಪಟ್ಟಣ, ಶಶಿಧರ ಗೊಲ್ಲರಹಳ್ಳಿಮಠ, ಪತ್ರಕರ್ತ ಕರಿಬಸಯ್ಯ ಹಿರೇಮಠ, ಕುಮಾರ ಕರ್ಚಡ ಇದ್ದರು.
ದರ್ಶನದಿಂದ ಪುಣ್ಯಫಲ: ಶ್ರಾವಣ ಮಾಸ ಉತ್ಸವ ಸಮಿತಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ್ ಮಾತನಾಡಿ, ಹಿಂದುಗಳಿಗೆ ಶ್ರಾವಣ ಮಾಸ ಶ್ರೇಷ್ಟವಾಗಿದೆ. ಶಿವಶರಣರ, ಧಾರ್ವಿುಕ ಕ್ಷೇತ್ರಗಳ ದರ್ಶನದಿಂದ ಹೆಚ್ಚು ಫಲ ಸಿಗಲಿದೆ. ಜೋಡಿನಂದೀಶ್ವರರ ದರ್ಶನದಿಂದ ಪುಣ್ಯಫಲಗಳು ಲಭಿಸಲಿವೆ ಎಂಬುದು ಪೌರಾಣಿಕ ಕಾಲದಿಂದಲೂ ನಂಬಿಕೆಯಿದೆ. ಶ್ರಾವಣ ಮಾಸದಲ್ಲಿ ಮಠ, ಮಾನ್ಯಗಳಿಗೆ ತೆರಳಿ ದೇವರ ದರ್ಶನ ಮಾಡಬೇಕು. ಯುವಪೀಳಿಗೆ ಆಧುನಿಕ ಗುಂಗಿನಲ್ಲಿ ಧರ್ಮಕಾರ್ಯಗಳಿಂದ ವಿಮುಖರಾಗಬಾರದು. ಪೂಜೆ, ಧಾರ್ವಿುಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದರು.