

ಬೆಳಗಾವಿ: ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ನೀಡುವ ವಿಧೇಯಕಕ್ಕೆ ಒಪ್ಪಿಗೆ ನೀಡಬಾರದು ಎಂದು ಒತ್ತಾಯಿಸಿ ಮಂಗಳವಾರ ಉತ್ತರ ಕರ್ನಾಟಕ ಟ್ರಸ್ಟ್‌ನ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಸಂವಿಧಾನದ ಆಶಯಗಳ ವಿರುದ್ಧವಾಗಿ ಮುಸ್ಲಿಮರಿಗೆ ಸಾರ್ವಜನಿಕ ಕಾಮಗಾರಿಗಳ ಗುತ್ತಿಗೆಗಳಲ್ಲಿ ಶೇ.4 ಮೀಸಲಾತಿ ನೀಡುವ ಮಸೂದೆ ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಸಂವಿಧಾನ ರಚಿಸುವಾಗಲೇ ಬಾಬಾಸಾಹೇಬ್ ಅಂಬೇಡ್ಕರ್ ಧರ್ಮಾಧಾರಿತ ಮೀಸಲಾತಿ ವಿರೋಧಿಸಿದ್ದಾರೆ. ಆದರೆ ಮತ ಬ್ಯಾಂಕ್‌ಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಮೀಸಲಾತಿ ನೀಡುವ ಮೂಲಕ ರಾಷ್ಟ್ರೀಯ ಏಕತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಧರ್ಮಾಧಾರಿತ ಮೀಸಲಾತಿ ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುವುದರಿಂದ ಮೀಸಲಾತಿ ಮಸೂದೆಗೆ ಒಪ್ಪಿಗೆ ನೀಡದಂತೆ ಒತ್ತಾಯಿಸಿದ್ದಾರೆ. ಜಿಲ್ಲಾಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಕಾರ್ಯದರ್ಶಿ ಆನಂದ ಕರಲಿಂಗಣ್ಣವರ, ಸಂತೋಷ ಮಾದಿಗರ, ಸುನೀಲ ಕನೇರಿ, ಗಿರೀಶ ಹರಕುಣಿ ಇತರರಿದ್ದರು.