ಮುಸ್ಲಿಂರ ತುಷ್ಠೀಕರಣ, ಹಿಂದುಗಳಿಗೆ ಅಪಮಾನ

By_vijayendra
ಬಿ.ವೈ.ವಿಜಯೇಂದ್ರ
Published on

ಬಾಗಲಕೋಟೆ: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದಿನ ಅವಽಯಲ್ಲಿ ವೀರಶೈವ/ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಬೆಂಕಿ ಹಚ್ಚುವ ಷಡ್ಯಂತ್ರವನ್ನು ಮಾಡಿದ್ದರು. ಈ ಅವಽಯಲ್ಲಿ ಜಾತಿ ಗಣತಿ ಹೆಸರಿನಲ್ಲಿ ಮುಸ್ಲಿಂರ ತುಷ್ಠೀಕರಣ ಮಾಡಿ ಹಿಂದುಗಳನ್ನು ಒಡೆಯುವ ಮೂಲಕ ಅವರಿಗೆ ಅಪಮಾನ ಮಾಡುವ ಕೆಲಸಕ್ಕೆ ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಮತ ವ್ಯಕ್ತಪಡಿಸಿದರು.

ಬಾಗಲಕೋಟೆಯಲ್ಲಿ ಗುರುವಾರ ನಡೆಯುವ ಜನಾಕ್ರೋಶ ಯಾತ್ರೆಗೆ ಮುನ್ನಾ ದಿನವೇ ಬೆಳಗಾವಿಯಿಂದ ಆಗಮಿಸುವ ಮಾರ್ಗ ಮಧ್ಯದಲ್ಲಿ ಲೋಕಾಪುರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು.

ಹಿಂದಿನ ಅವಽಯಲ್ಲಿ ಸಿದ್ದರಾಮಯ್ಯ ಅವರು ಲಿಂಗಾಯತ ಪ್ರತ್ಯೇಕ ಧರ್ಮದ ಹೆಸರಿನಲ್ಲಿ ವೀರಶೈವ ಲಿಂಗಾಯತರನ್ನು ಒಡೆಯುವ ಕೆಲಸ ಮಾಡಿದ್ದರು. ಅದು ಕೈಗೂಡದೇ ಚುನಾವಣೆಯಲ್ಲಿ ಅವರಿಗೆ ಹಿನ್ನೆಡೆ ಆಯಿತು. ಕಳೆದ ಚುನಾವಣೆಗೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಬಳ್ಳಾರಿಯಲ್ಲಿ ಬಹಿರಂಗವಾಗಿ ವೀರಶೈವ/ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಿಂದ ದೊಡ್ಡ ತಪ್ಪಾಗಿದೆ. ಧರ್ಮ ಒಡೆಯುವ ಕೆಲಸಕ್ಕೆ ಕೈಹಾಕಿ ತಪ್ಪು ಮಾಡಿದ್ದೇವೆ ಎಂದು ಭಾಷಣ ಮಾಡಿದ್ದರು. ಆದರೆ, ಇವತ್ತು ಏನು ಮಾಡುತ್ತಿದ್ದಾರೆ? ಹಿಂದುಗಳಿಗೆ ಅಪಮಾನ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಜಾತಿ ಗಣತಿ ವಿಚಾರದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಚಾರದ ಬಗ್ಗೆ ಪ್ರಶ್ನಿಸಿದಾಗ, ಈ ಬಗ್ಗೆ ಮಾಧ್ಯಮವರು ಬಹಳ ಮನಸ್ಸಿಗೆ ಹಚ್ಚಿಕೊಂಡಿದ್ದೀರಿ. ಸಿದ್ದರಾಮಯ್ಯ ಅವರ ಸಿಎಂ ಕುರ್ಚಿ ಅಲ್ಲಾಡುತ್ತೋ ಆವಾಗೆಲ್ಲ ಇದನ್ನು ತರುತ್ತಾರೆ. ಹಾವಿನ ಬುಟ್ಟಿಯಿಂದ ಹಾವು ತೆಗೆಯುತ್ತೇವೆ ಎಂದು ಹೇಳೋಕೆ ಶುರುಮಾಡಿ ಎಷ್ಟು ವರ್ಷಗಳು ಆಯಿತು? ಸಿದ್ದರಾಮಯ್ಯ ಅವರಿಗೆ ನಿಜವಾಗಿಯೂ ಕಾಳಜಿ, ಪ್ರಾಮಾಣಿಕತೆ ಇದ್ದಿದ್ದರೆ ಹಿಂದುಳಿದ ಹಾಗೂ ಶೋಷಿತ ಸಮುದಾಯಗಳಿಗೆ ನ್ಯಾಯ ಕೊಡಬೇಕು ಎನ್ನುವುದಾಗಿದ್ದರೆ ಹಿಂದಿನ ಅವಽಯಲ್ಲೆ ಈ ಕೆಲಸವನ್ನು ಮಾಡಬೇಕಿತ್ತು. ಈಗಲೂ ಸರ್ಕಾರ ಬಂದು ೨೦ ತಿಂಗಳು ಕಳೆದರೂ ಯಾಕೆ ಈ ವರೆಗೂ ಅವರಿಗೆ ಸಮಯ ಸಿಕ್ಕಿರಲಿಲ್ವಾ? ಡಿ.ಕೆ.ಶಿವಕುಮಾರ ಆ ವರದಿಯನ್ನು ಅಧ್ಯಯನ ಮಾಡಿಲ್ಲ ಎಂದು ಹೇಳುತ್ತಾರೆ ಎಂದು ವಿಜಯೇಂದ್ರ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರ ಬೀಳಿಸುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಅವರ ಆಡಳಿತ ಪಕ್ಷದ ಶಾಸಕರ ಬಗ್ಗೆ ಅವರಿಗೆ ವಿಶ್ವಾಸ ಕಡಿಮೆಯಾಗಿದೆ. ಆ ಪಕ್ಷದ ಶಾಸಕರಿಗೆ ಸರ್ಕಾರದ ಮೇಲೆ ವಿಶ್ವಾಸ ಕಡಿಮೆ ಆಗುತ್ತಿದೆ. ಒಬ್ಬ ಶಾಸಕ ಹೇಳುತ್ತಾರೆ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು. ಮತ್ತೊಬ್ಬ ಶಾಸಕ ಅನುದಾನ ಸಿಗುತ್ತಿಲ್ಲ, ಏನು ದರಿದ್ರ ಸರ್ಕಾರ ಇದು ಎಂದು ಮಾತನಾಡುತ್ತಾರೆ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಭ್ರಷ್ಟಾಚಾರದಲ್ಲಿ ಕರ್ನಾಟಕ ಇಡೀ ದೇಶದಲ್ಲಿ ನಂಬರ್ ಒನ್ ಎನ್ನುತ್ತಾರೆ. ಇದರ ಮೇಲೆ ಈ ಸರ್ಕಾರದ ಮೇಲೆ ಇನ್ನೇನು ನಿರೀಕ್ಷೆ ಮಾಡುತ್ತೀರಿ ಎಂದು ಪ್ರಶ್ನಿಸಿದ ಅವರು, ಆಡಳಿತ ಪಕ್ಷದ ಶಾಸಕರು ಸಹಜವಾಗಿ ಈ ಸರ್ಕಾರದ ಬಗ್ಗೆ ಬೇಸತ್ತಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net