

ಹನೂರು: ಪಟ್ಟಣ ಸಮೀಪದ ಆರ್.ಎಸ್.ದೊಡ್ಡಿಯ ಮುಸ್ಲಿಂ ಧರ್ಮಗುರುಗಳ ಮನೆಯೊಂದರ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿರುವ ಕಳ್ಳರು 233 ಗ್ರಾಂ ಚಿನ್ನ ಹಾಗೂ 20 ಸಾವಿರ ರೂ. ನಗದನ್ನು ದೋಚಿ ಪರಾರಿಯಾಗಿರುವುದು ಬುಧವಾರ ಬೆಳಕಿಗೆ ಬಂದಿದೆ.
ಆರ್.ಎಸ್. ದೊಡ್ಡಿಯಲ್ಲಿ ವಾಸವಾಗಿರುವ ಸಬೀರ್ ಆಹಮದ್ ಅವರು ಸಂಬಂಧಿಕರ ಮದುವೆಗೆ ಅ.18 ರಂದು ಗುಂಡ್ಲುಪೇಟೆಗೆ ತೆರಳಿದ್ದು, ಬುಧವಾರ ಬೆಳಗ್ಗೆ 8.40ರಲ್ಲಿ ಮನೆಗೆ ಬಂದಾಗ ಗೇಟ್‌ಗೆ ಹಾಕಲಾಗಿದ್ದ ಬೀಗ ಹಾಗೆ ಇದ್ದು, ಮನೆಯ ಬಾಗಿಲಿನ ಬೀಗ ಮುರಿದ ಸ್ಥಿತಿಯಲ್ಲಿ ಕೊಂಚ ತೆರೆದಿತ್ತು. ಸಬೀರ್ ಆಹಮದ್ ಮನೆಯೊಳಗೆ ತೆರಳಿ ವೀಕ್ಷಿಸಿದಾಗ ಬೀರುವಿನ ಬೀಗವನ್ನು ಮುರಿದು ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. 70 ಗ್ರಾಂನ ಚಿನ್ನದ ನೆಕ್ಲೇಸ್, 65 ಗ್ರಾಂನ ಚಿನ್ನದ ಸರ, 16 ಗ್ರಾಂ ತೂಕದ 2 ಬಳೆಗಳು, 20 ಗ್ರಾಂನ ಮಕ್ಕಳ 10 ಉಂಗುರ, 5 ಗ್ರಾಂನ 2 ಉಂಗುರ, 4 ಗ್ರಾಂ ಹಾಗೂ 3.5 ಗ್ರಾಂನ ಚಿನ್ನದ ಉಂಗುರ, 2.5 ಗ್ರಾಂನ 2 ಉಂಗುರ, 7 ಗ್ರಾಂ ನೆತ್ತಿ ಸರ, 12 ಗ್ರಾಂ ಚಿನ್ನದ ಸರ, 15 ಗ್ರಾಂ ಚಿನ್ನದ ಡಾಲರ್, 6 ಗ್ರಾಂನ ಓಲೆ, 250 ಗ್ರಾಂನ ಬೆಳ್ಳಿ ಕಾಲ್ಚೈನ್ ಹಾಗೂ 20 ಸಾವಿರ ರೂ ನಗದು ಕಳ್ಳತನವಾಗಿದೆ.
ಸಬೀರ್ ಆಹಮದ್ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡ ಹನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಜಿಲ್ಲಾ ಬೆರಳಚ್ಚು ಹಾಗೂ ಶ್ವಾನದಳದ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದರು. ಮುಂದಿನ ತನಿಖೆ ಕೈಗೊಂಡಿದ್ದಾರೆ.