ಮುಳ್ಳೂರು ಸರ್ಕಾರಿ ಶಾಲೆಯಲ್ಲಿ ಮಕ್ಕಳ ಜಾತ್ರೋತ್ಸವ

14ss1mulluru sscl makkala jatre
Published on

ಶನಿವಾರಸಂತೆ: ಮುಳ್ಳೂರು ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಜಾತ್ರೋತ್ಸವ ಶೀರ್ಷಿಕೆಯಡಿ ವಿನೂತನವಾಗಿ ಮಕ್ಕಳ ದಿನವನ್ನು ಆಚರಿಸಲಾಯಿತು.

ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಿ.ಎಸ್.ಸತೀಶ್ ಮತ್ತು ಸಹ ಶಿಕ್ಷಕರು ಜತೆಗೂಡಿ ವಾರಕ್ಕೂ ಮೊದಲೇ ಶಾಲಾ ಮುಂಭಾಗದಲ್ಲಿ ಜಾತ್ರೆಯ ವಾತಾವರಣ ಸೃಷ್ಟಿಸಿ ಸಿದ್ಧತೆ ನಡೆಸಿದರು. ಶಾಲಾ ಮುಂಭಾಗದಲ್ಲಿ ಸೃಷ್ಟಿಸಿದ ಜಾತ್ರೆಯಲ್ಲಿ ಕೃತಕವಾಗಿ ತಯಾರಿಸಿದ ಜಾಯಿಂಟ್ ವ್ಹೀಲ್, ಕೊಲಂಬಸ್ ಮುಂತಾದವುಗಳನ್ನು ಅಳವಡಿಸಲಾಗಿತು.

ಶಾಲಾ ವಿದ್ಯಾರ್ಥಿಗಳು ನಾನಾ ತರಹದ ಆಟಿಕೆ ವಸ್ತುಗಳು, ಬಲೂನ್, ಗೊಂಬೆ ಮುಂತಾದ ವಸ್ತುಗಳನ್ನು ತಂದು ಮಾರಾಟ ಮಾಡಿದರು. ಮಕ್ಕಳು ತಮ್ಮ ಮನೆಗಳಲ್ಲಿ ಬೆಳೆದ ತರಕಾರಿ, ಸೊಪ್ಪು ಸೇರಿದಂತೆ ಎಳನೀರು, ಮನೆಯಲ್ಲಿ ತಯಾರಿಸಿದ ಪಾನಿಪುರಿ, ಬೇಲ್‌ಪುರಿ, ಚುರುಮುರಿಯನ್ನು ಜಾತ್ರೆಗೆ ತಂದು ಮಾರಾಟ ಮಾಡಿದರು. ನಿಜವಾಗಿ ನಡೆಯುವ ಜಾತ್ರೆಗಳಲ್ಲಿ ವ್ಯಾಪಾರಿಗಳು ಗ್ರಾಹಕರನ್ನು ವಸ್ತುಗಳನ್ನು ಕೊಳ್ಳಲು ಕೂಗಿ ಕರೆಯುವಂತೆ ವಿದ್ಯಾರ್ಥಿಗಳು ಗ್ರಾಹಕರನ್ನು ಕಡಿಮೆ ಬೆಲೆ ಇದೆ ವಸ್ತುಗಳನ್ನು ಖರಿದಿಸುವಂತೆ ಕೂಗಿ ಕರೆಯುತ್ತಿದ್ದರು.

ಮಕ್ಕಳ ಜಾತ್ರೆಯಾಗಿದ್ದ ಹಿನ್ನೆಲೆಯಲ್ಲಿ ಮಕ್ಕಳು ಎಳನೀರು ಒಂದಕ್ಕೆ ಕೇವಲ 20 ರೂ.ಗೆ ಮಾರಾಟ ಮಾಡಿದರು. ಜಾತ್ರೆಯಲ್ಲಿ ಕೃತಕ ಸಿನಿಮಾ ಥಿಯೇಟರ್ ನಿರ್ಮಿಸಲಾಗಿತ್ತು. ಸಿನಿಮಾ ಥಿಯೇಟರ್ ಒಳಗೆ ಸಿನಿಮಾ ವೀಕ್ಷಿಸಲು ಅಸನಗಳನ್ನು ಅಳವಡಿಸಲಾಗಿತು. ಕೊನೆಗೆ ಪ್ರೊಜೆಕ್ಟರ್ ಮೂಲಕ ಮಕ್ಕಳಿಗೆ ಮಕ್ಕಳ ಸಿನಿಮಾ ತೋರಿಸಲಾಯಿತು.

ಒಟ್ಟಿನಲ್ಲಿ ಮುಳ್ಳೂರು ಶಾಲೆಯಲ್ಲಿ ಮಕ್ಕಳ ದಿನವನ್ನು ಜಾತ್ರೆ ನಡೆಯುವ ದೃಶ್ಯದಂತೆ ಆಚರಣೆ ಮಾಡಲಾಯಿತು.

ವಿಶೇಷವಾಗಿ ಜಾತ್ರೆಯಲ್ಲಿ ಮಕ್ಕಳೇ ವ್ಯಾಪಾರಿಗಳು ಮತ್ತು ಮಕ್ಕಳೇ ಗ್ರಾಹಕರಾಗಿದ್ದು ವಿಶೇಷವಾಗಿತು. ಜಾತ್ರೆಯಲ್ಲಿ ಪಾಲಕರು, ಶಿಕ್ಷಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net