

ಕೊಳ್ಳೇಗಾಲ: ತಾಲೂಕಿನ ಕಲಿಯೂರು- ಮುಳ್ಳೂರು ಗ್ರಾಮದ ಮುಖ್ಯ ರಸ್ತೆ ಗುಂಡಿ ಬಿದ್ದಿದ್ದು ವಾಹನ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ.
ಶ್ರೀರಂಗಪಟ್ಟಣ-ಮಲೆ ಮಹದೇಶ್ವರ ಬೆಟ್ಟ ಸಂಪರ್ಕ ಕಲ್ಪಿಸುವ ಹೆದ್ದಾರಿ ರಸ್ತೆ ಇದಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಲೋಕೋಪಯೋಗಿ ಇಲಾಖೆಗೆ ಈ ರಸ್ತೆ ಸೇರಿದೆ. ಹೊಸ ಹಂಪಾಪುರ ಗ್ರಾಮದ ನಂತರ ಮುಳ್ಳೂರು ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಸಿಗುವ ಸುವರ್ಣಾವತಿ ನದಿ ಸೇತುವೆಯಿಂದ ಮುಳ್ಳೂರು ಗ್ರಾಮದ ಕೆರೆಯವರೆಗೂ ಗುಂಡಿಗಳು ಬಿದ್ದು ವಾಹನ ಸವಾರರು ನಿತ್ಯಯಾತನೆ ಅನುಭವಿಸುವಂತಾಗಿದೆ.
ಮರಳು ಲಾರಿಗಳು ಈ ರಸ್ತೆಯಲ್ಲಿ ಚಲಿಸುವುದರಿಂದ ಈ ರಸ್ತೆ ಅಧ್ವಾನವಾಗಲು ಕಾರಣವಾಗಿದೆ. ಕೆಲ ತಿಂಗಳಿಂದ ರಸ್ತೆ ಸಮಸ್ಯೆ ಇದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುಂಡಿ ಮುಚ್ಚುವ ಕೆಲಸ ಮಾಡಿಲ್ಲ. ಕೊಳ್ಳೇಗಾಲದಿಂದ ಮುಳ್ಳೂರು, ಕಲಿಯೂರು, ಹೊಸ ಮಾಲಂಗಿ, ತಡಿ ಮಾಲಂಗಿ, ತಿ.ನರಸೀಪುರ, ಮೈಸೂರು, ಮಳವಳ್ಳಿ ತಾಲೂಕು ವ್ಯಾಪ್ತಿಯ ಗ್ರಾಮಗಳಿಗೆ ತೆರಳಲು ಈ ರಸ್ತೆಯಲ್ಲೇ ಸಾಗಬೇಕಿದೆ. ಹಾಗಾಗಿ ಜನರು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರುತ್ತಿದ್ದಾರೆ.
ಹೊಸ ರಸ್ತೆಯ ಭಾಗ್ಯವೇ ಇಲ್ಲ: ಕಲಿಯೂರು-ಮುಳ್ಳೂರು ರಸ್ತೆಯಾಗಿ ದಶಕವೇ ಕಳೆದಿದೆ. ಮಳೆಗಾಲದದಲ್ಲಿ, ಭಾರಿ ವಾಹನಗಳು ಓಡಾಡುವುದರಿಂದ ಗುಂಡಿ ಬೀಳುವ ರಸ್ತೆಗೆ ತೇಪೆ ಹಾಕಲಾಗುತ್ತಿದೆ. ಬಳಿಕ, ರಸ್ತೆ ಕಿತ್ತು ಬರುತ್ತಿದೆ. ಶಾಶ್ವತವಾಗಿ ಕ್ರಮ ಕೈಗೊಳ್ಳುವುದೇ ಇಲ್ಲ ಎಂಬುದು ಜನರ ಆರೋಪ.
ಮುಳ್ಳೂರು ರಸ್ತೆಯಲ್ಲಿ ವಾಹನ ಸಂಚಾರ ಕಷ್ಟವಾಗಿದೆ. ಆರೇಳು ತಿಂಗಳಿನಿಂದ ಈ ಪರಿಸ್ಥಿತಿ ಇದ್ದು. ಅಪಘಾತಗಳು ಹೆಚ್ಚಾಗುತ್ತಿವೆ. ಈ ರಸ್ತೆಯಲ್ಲಿ ವಿದ್ಯುತ್ ದೀಪಗಳೂ ಇಲ್ಲ. ರಾತ್ರಿ ಸಂಚಾರ ಅಪಾಯ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು.
ವೆಂಕಟೇಶ್, ಮುಳ್ಳೂರು ಗ್ರಾಮ, ಕೊಳ್ಳೇಗಾಲ
ಮುಳ್ಳೂರು-ಕಲಿಯೂರು ಮಾರ್ಗ ಗುಂಡಿ ಬಿದ್ದು ಸಂಚಾರಕ್ಕೆ ತೊಂದರೆ ಆಗಿರುವುದು ಗಮನದಲ್ಲಿದೆ. ಸದ್ಯದಲ್ಲಿ ಗುಂಡಿಗಳಿಗೆ ಡಾಂಬರು ಹಾಕಿಸಲಾಗುತ್ತದೆ. ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ಸುರೇಂದ್ರ, ಇಂಜಿನಿಯರ್, ಲೋಕೋಪಯೋಗಿ