

ಬಾಗಲಕೋಟೆ: ಮುಧೋಳ ಕ್ಷೇತ್ರದಲ್ಲಿ ಬಿಜೆಪಿಯ ಮನೆ ಜಗಳ ಈಗ ಅಕ್ಷರಶಃ ಬೀದಿಗೆ ಬಂದಿದೆ. ಅದು ದೊಡ್ಡಮಟ್ಟದಲ್ಲಿ ಸಪ್ಪಳ ಆರಂಭಿಸಿದೆ. ಮುಧೋಳ ಕ್ಷೇತ್ರದಲ್ಲಿ ಗೋವಿಂದ ಕಾರಜೋಳ ಅವರ ಜೊತೆಯಲ್ಲೆ ಆರಂಭದಿಂದಲೂ ಇದ್ದ ರನ್ನ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಮಣ್ಣ ತಳೇವಾಡ ನಡುವೆ ಬಿರುಕು ಮೂಡಿದೆ...!
ಕಳೆದ ತಿಂಗಳು ಮುಧೋಳ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಹುಮತ ಇದ್ದರೂ ಅಽಕಾರ ಹಿಡಿಲಾಗದೇ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿತ್ತು. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ್ದ ಬಿಜೆಪಿ ನಾಲ್ವರು ಸದಸ್ಯರು ರಾಮಣ್ಣ ತಳೇವಾಡ ಅವರ ಬೆಂಬಲಿಗರು ಇದ್ದು, ಅವರಿಂದಾಗಿಯೇ ಬಿಜೆಪಿ ಸೋತಿತು ಎನ್ನುವ ಆರೋಪದ ಮೇಲೆ ರಾಮಣ್ಣ ತಳೇವಾಡ ಸೇರಿ ನಾಲ್ವರು ಬಿಜೆಪಿ ಸದಸ್ಯರನ್ನು ಅಲ್ಲಿನ ನಗರ ಮಂಡಲ ಅಧ್ಯಕ್ಷರು ಪಕ್ಷದಿಂದ ಉಚ್ಛಾಟಿಸಿದ್ದರು.
ಇದರಿಂದ ಕೆರಳಿ ಕೆಂಡವಾಗಿರುವ ರಾಮಣ್ಣ ತಳೇವಾಡ ಹಾಗೂ ಅವರ ಬೆಂಬಲಿಗರು ಬುಧವಾರ ಬಾಗಲಕೋಟೆ ನವನಗರದಲ್ಲಿ ಇರುವ ಬಿಜೆಪಿ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕಿ ದೊಡ್ಡಮಟ್ಟದ ಪ್ರತಿಭಟನೆಗೆ ಮುಂದಾಗಿದ್ದರು. ಆದರೆ, ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ ಹಾಗೂ ಮುಖಂಡ ಬಸವರಾಜ ಯಂಕಂಚಿ ಸೇರಿ ಕೆಲ ಹಿರಿಯ ಮುಖಂಡರು ಕಚೇರಿ ಆವರಣದಲ್ಲಿ ತಳೇವಾಡ ಬೆಂಬಲಿಗರ ಅಹವಾಲು ಆಲಿಸಿದ್ದರಿಂದ, ಉಚ್ಛಾಟನೆ ಕ್ರಮವನ್ನು ಹಿಂಪಡೆಯಲು ೧೫ ದಿನಗಳ ಗಡುವು ಕೊಟ್ಟು ತೆರಳಿದ್ದಾರೆ. ಇಲ್ಲವಾದರೆ ಬೆಂಗಳೂರಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ಮನೆ ಎದುರು ಧರಣಿ ನಡೆಸಿ, ಕಾರಜೋಳ ಹಾಗೂ ಅವರ ಪುತ್ರನ ಬಗ್ಗೆ ಎಲ್ಲ ಮಾಹಿತಿ ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ರಾಮಣ್ಣ ತಳೇವಾಡ, ಸಂಸದ ಕಾರಜೋಳ ಅವರಿಗೆ ಪುತ್ರ ವ್ಯಾಮೋಹ ಜಾಸ್ತಿ ಆಗಿದೆ. ಕ್ಷೇತ್ರದಲ್ಲಿ ಬಿಜೆಪಿ ಕಟ್ಟಿ, ಬೆಳೆಸಿದ ಮೂಲ ಕಾರ್ಯಕರ್ತರಿಗೆ ಬೆಲೆ ಇಲ್ಲವಾಗಿದೆ ಮುಧೋಳದಲ್ಲಿ ಬಿಜೆಪಿ ಇಲ್ಲವೇ ಇಲ್ಲ. ಈಗ ಏನಿದ್ದರೂ ಅರುಣ ಬಿಜೆಪಿ ಮಾತ್ರ ಉಳಿದಿದೆ. ಅವರ ಸುತ್ತಮುತ್ತ ಇರುವವರೆಲ್ಲ ಕಾಂಗ್ರೆಸ್ ನಿಂದ ಬಂದವರೇ ಇದ್ದಾರೆ. ಅವರಿಗೆ ಪಕ್ಷದ ಪದಾಧಿಕಾರಿ ಹುದ್ದೆ ಕೊಟ್ಟಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೆ ಮುಧೋಳ ಕ್ಷೇತ್ರದಲ್ಲಿ ಅರುಣ ಕಾರಜೋಳ ಅವರಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದಾರೆ. ಅರುಣ ಕಾರಜೋಳಗೆ ಟಿಕೆಟ್ ಕೊಟ್ಟಿದ್ದಾದರೆ ಆತನ ಜನಪ್ರಿಯ, ಜನೋಪಯೋಗಿ ಕಾರ್ಯಗಳು ಬಹಳ ಇವೆ. ಅವೆಲ್ಲವನ್ನು ಬಿಡುಗಡೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಜನಪ್ರಿಯ ಕಾರ್ಯಗಳ ಎಂದರೆ ಏನು ಅಂತ ನಾನೀಗ ಹೇಳಲ್ಲ. ನನ್ನ ಉಚ್ಛಾಟನೆ ಹಿಂಪಡೆದರೂ, ಹಿಂಪಡೆಯದಿದ್ದರೂ ಅವುಗಳನ್ನು ಬಿಡುಗಡೆ ಮಾಡಿಯೇ ಮಾಡುತ್ತೇವೆ. ನಮ್ಮ ಮೇಲೆ ಕೇಸ್ ಹಾಕಿದರೂ ಕೇಳಲ್ಲ. ಚುನಾವಣೆಯಲ್ಲಿ ಅವು ಹೊರಬರುವುದಂತೂ ಖಚಿತ. ಅವರ ಜನೋಪಯೋಗಿ ಕಾರ್ಯಗಳು ಬಹಳ ಇವೆ. ಈಗ ಶೇ.೫೦ ರಷ್ಟು ದಾಖಲೆ ಸಿಕ್ಕಿವೆ. ಇನ್ನಷ್ಟು ಸಿಗುತ್ತವೆ. ಮುಧೋಳದಲ್ಲಿ ಕಾರಜೋಳ ಸೋಲಿಗೆ ಅವರ ಪುತ್ರನೇ ಕಾರಣ ಎಂದು ಆರೋಪಿಸಿದ್ದಲ್ಲದೇ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಗಿದ್ದ ಪಿ.ಎಚ್.ಪೂಜಾರ ವಿರುದ್ಧ ಕೆಲಸ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿತ್ತು. ಈ ಬಗ್ಗೆ ಪೂಜಾರ ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ತಿಳಿಯುತ್ತಿಲ್ಲ ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಕಾರಜೋಳ ಅವರ ವಿರುದ್ಧ ಕೆಲಸ ಮಾಡಿದ್ದೇನೆ ಎಂದು ಅವರು ತಮ್ಮ ಆತ್ಮ ಮುಟ್ಟಿಕೊಂಡು ಹೇಳಲಿ. ನಾನು ನನ್ನ ತಂದೆ-ತಾಯಿ ಮೇಲೆ ಆಣೆ ಮಾಡಿ ಹೇಳುತ್ತೇನೆ. ನಾನು ಚುನಾವಣೆಯಲ್ಲಿ ಅವರಿಗೆ ವಿರೋಧ ಮಾಡಿಲ್ಲ ಎಂದು ರಾಮಣ್ಣ ತಳೇವಾಡ ತಿಳಿಸಿದರು.