

ಅರಸೀಕೆರೆ ಗ್ರಾಮಾಂತರ: ಅರಸೀಕೆರೆ ತಾಲೂಕು ಮುದುಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ರಾತ್ರಿ ನಡೆದಿದ್ದ ವಾಮಾಚಾರಕ್ಕೆ ವಿದ್ಯಾರ್ಥಿಗಳು ಬೆಚ್ಚಿ ಬಿದ್ದಿದ್ದಾರೆ.
ಒಂಬತ್ತನೇ ತರಗತಿ ಕೊಠಡಿ ಬೀಗಕ್ಕೆ ಹಸಿ ನೂಲು ಸುತ್ತಿ, ಕೊಠಡಿಯ ಬಾಗಿಲಿನಿಂದ ನಾಲ್ಕು ದಿಕ್ಕುಗಳಿಗೂ ಹಸಿ ನೂಲು ಕಟ್ಟಿದ್ದಾರೆ. ಕೊಠಡಿ ಮುಂದೆ ಅರಿಶಿಣ, ಕುಂಕುಮ, ಬಾಳೆ ಹಣ್ಣು, ತೆಂಗಿನಕಾಯಿ ಇಟ್ಟಿದ್ದಾರೆ. ಸತತ ಎರಡು ದಿನಗಳಿಂದ ನಡೆಯುತ್ತಿರುವ ವಾಮಾಚಾರ ಬುಧವಾರ ರಾತ್ರಿ ಶಾಲೆಯ ಎದುರು ತೆಂಗಿನ ಗರಿಯಿಂದ ಚಪ್ಪರ ಹಾಕಿ ಗೊಂಬೆ ಮುರಿದಿದ್ದರು. ಎಳನೀರು, ಹೊಂಬಾಳೆ, ತೆಂಗಿನಕಾಯಿ, ಕಿತ್ತಳೆಹಣ್ಣು, ಇತರ ಪೂಜಾ ಪದಾರ್ಥಗಳನ್ನಿಟ್ಟು ಮಾಟ-ಮಂತ್ರ ಮಾಡಲಾಗಿದೆ.
ಸುಮಾರು ಎಪ್ಪತ್ತು ಮಕ್ಕಳಿರುವ ಸರ್ಕಾರಿ ಪ್ರೌಢಶಾಲೆ ಇದಾಗಿದ್ದು ಭೀತಿ ಹುಟ್ಟಿಸಿದೆ. ಶಾಲೆಯು ಸುಮಾರು 70 ವಿದ್ಯಾರ್ಥಿಗಳನ್ನು ಹೊಂದಿದ್ದು, ಈ ಘಟನೆಯಿಂದ ಮಕ್ಕಳು ಹಾಗೂ ಪಾಲಕರು ಭಯಭೀತರಾಗಿದ್ದಾರೆ. ವಾಮಾಚಾರದ ದೃಶ್ಯಗಳನ್ನು ಕಂಡು ಮಕ್ಕಳು ಚಿಂತೆಗೀಡಾದ್ದಾರೆ ಎನ್ನುತ್ತಾರೆ ಶಿಕ್ಷಕರು.
ಪೊಲೀಸರಿಗೆ ದೂರು: ಶಾಲೆಯ ಮುಖ್ಯಶಿಕ್ಷಕರು ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದೆ ರೀತಿ ಪದೇ ಪದೆ ಕೃತ್ಯವೆಸಗುತ್ತಿರುವವರನ್ನು ಕೊಡಲೇ ಬಂಧಿಸಿ ಶಾಲೆಗೆ ಮುಕ್ತಿ ದೊರಕಿಸಿ ಮುದುಡಿ ಗ್ರಾಮದ ನಿವಾಸಿ ಶೇಖರಪ್ಪ ಆಗ್ರಹಿಸಿದ್ದಾರೆ.