ಮುಟ್ಟಳ್ಳಿಯಲ್ಲಿ ಮತ್ತೆ ಕುಸಿದ ಗುಡ್ಡ

6bkl4 (7)
Published on

ಭಟ್ಕಳ: ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಮಳೆ ಸೃಷ್ಟಿಸುತ್ತಿರುವ ಅವಾಂತರ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಮುಟ್ಟಳ್ಳಿಯಲ್ಲಿ ಮತ್ತೆ ಗುಡ್ಡಕುಸಿತ ಉಂಟಾಗಿದ್ದು ಗ್ರಾಮಸ್ಥರನ್ನು ಆತಂಕಕ್ಕೀಡುಮಾಡಿದೆ.
ಇದೇ ಭಾಗದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಸುರಿದಿದ್ದ ಧಾರಾಕಾರ ಮಳೆಯಿಂದಾಗಿ ಗ್ರಾಮದಲ್ಲಿ ಧರೆ ಕುಸಿದು ಮನೆಯೊಂದರ ಮೇಲೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದರು.
ಇದೀಗ ಮತ್ತೆ ಧರೆ ಕುಸಿದಿದ್ದು ಸುತ್ತಲಿನ ಮನೆಗಳಲ್ಲಿನ ಜನರನ್ನು ಸ್ಥಳೀಯ ಆಡಳಿತ ಬೇರೆಡೆಗೆ ಸ್ಥಳಾಂತರ ಮಾಡಿದೆ.
ಹತ್ತಕ್ಕೂ ಅಧಿಕ ಮನೆಗಳ ಜನರು ಇದೀಗ ತಮ್ಮ ಮನೆಗಳನ್ನು ತೊರೆದಿದ್ದಾರೆ.
ಕುಸಿತವಾದ ಗುಡ್ಡದ ಮೇಲೆ ಮೇಲಿನ ಮುಟ್ಟಳ್ಳಿ, ಗೆಂಡೆಮೂಲೆ ಮತ್ತು ಸಬ್ಬತ್ತೆ ಎನ್ನುವ ಗ್ರಾಮಗಳಿವೆ. ಈ ರಸ್ತೆಯನ್ನು ಅವಲಂಬಿಸಿ ಸುಮಾರು 25ಕ್ಕೂ ಅಧಿಕ ಕುಟುಂಬಗಳಿವೆ. ಇದೀಗ ಗುಡ್ಡ ಕುಸಿತದಿಂದಾಗಿ ಮೇಲ್ಬಾಗದ ಊರುಗಳ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಈ ಭಾಗದ ಸಂಚಾರವನ್ನು ಪರ್ಯಾಯ ಮಾರ್ಗಕ್ಕೆ ಬದಲಿಸಲಾಗಿದೆ.
ಇನ್ನು ಗುಡ್ಡ ಕುಸಿತ ಮುಂದುವರೆದ ಬೆನ್ನಲ್ಲೇ ಗ್ರಾಮದ ಹಲವರು ಆತಂಕದಲ್ಲಿ ತಮ್ಮ ಮನೆಗಳನ್ನ ತೊರೆದು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಮಳೆ ಹೆಚ್ಚಾದಲ್ಲಿ ಮತ್ತೆ ಗುಡ್ಡ ಕುಸಿಯುವ ಸಾಧ್ಯತೆಯಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net