

ಶಿರಸಿ: ಕನ್ನಡದ ಪ್ರಥಮ ರಾಜಧಾನಿ ಬನವಾಸಿಯಲ್ಲಿ ಫೆ.8 ಹಾಗೂ 9ರಂದು ಸಂಘಟಿಸಿರುವ ಕದಂಬೋತ್ಸವವನ್ನು ಅದ್ದೂರಿಯಿಂದ ಆಚರಿಸುವ ನೆಪದಲ್ಲಿ ಮುಜರಾಯಿ ಇಲಾಖೆ ತನ್ನ ವ್ಯಾಪ್ತಿಯ ದೇವಾಲಯಗಳಿಗೆ ದೇಣಿಗೆ ನೀಡುವಂತೆ ಸೂಚನೆ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ತಲಾ ಒಂದು ಲಕ್ಷ ರೂಪಾಯಿಗಳ ದೇಣಿಗೆ ನೀಡುವಂತೆ ದೇವಸ್ಥಾನಗಳಿಗೆ ಮುಜರಾಯಿ ಇಲಾಖೆಯು ಜ. 30ರಂದೇ ಸೂಚನೆ ನೀಡಿದೆ. ಈ ಬಗ್ಗೆ ದೇವಾಲಯಗಳ ವ್ಯವಸ್ಥಾಪನಾ ಸಮಿತಿಗೆ ಪತ್ರ ಬರೆಯಲಾಗಿದೆ.
ಕದಂಬೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಣಯಿಸಲಾಗಿದೆ. ಜಿಲ್ಲಾಡಳಿತದ ಎಲ್ಲ ಇಲಾಖೆಗಳ ಸಹಯೋಗದಿಂದ ಉತ್ಸವ ಆಚರಿಸಲಾಗುತ್ತಿದೆ. ಹೀಗಾಗಿ, ಧಾರ್ವಿುಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಪ್ರವರ್ಗ ಎ ಮತ್ತು ಬಿ ವರ್ಗದ ದೇವಸ್ಥಾನಗಳಿಂದ ದೇಣಿಗೆ ಸಂಗ್ರಹಿಸಲು ಉದ್ದೇಶಿಸಿದ್ದು, ದೇವಸ್ಥಾನದ ನಿಧಿಯಿಂದ ಉತ್ತರ ಕನ್ನಡ ಜಿಲ್ಲಾಧಿಕಾರಿ ಹೆಸರಿಗೆ 1 ಲಕ್ಷ ರೂ. ಮೊತ್ತದ ಚೆಕ್ ಸಲ್ಲಿಸಬೇಕು ಎಂದು ಹಿಂದು ಧಾರ್ವಿುಕ ಸಂಸ್ಥೆಗಳು ಹಾಗೂ ಧರ್ಮದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಪತ್ರದಲ್ಲಿ ಸೂಚಿಸಿದ್ದಾರೆ. ಈಗಾಗಲೇ ಶಿರಸಿಯ ಮಾರಿಕಾಂಬಾ ದೇವಾಲಯದ ಆಡಳಿತ ಮಂಡಳಿ ನಾಲ್ಕು ಲಕ್ಷ ರೂ. ದೇಣಿಗೆ ನೀಡಿದೆ. ಜಿಲ್ಲೆಯ ವಿವಿಧ ದೇವಾಲಯಗಳ ಸಮಿತಿಗಳು ಸಹ ದೇಣಿಗೆಯನ್ನು ಸಮಿತಿಗೆ ಸಲ್ಲಿಸಿವೆ. ಸರ್ಕಾರ ಹಾಗೂ ಅಧಿಕಾರಿಗಳ ಈ ನಡೆ ಈಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.
ಜಿಲ್ಲಾಧಿಕಾರಿ ಕೆ.ಹರೀಶಕುಮಾರ ನೇತೃತ್ವದಲ್ಲಿ ಉತ್ಸವದ ರೂಪುರೇಷೆ ನಡೆಯುತ್ತಿದೆ. ಅನುದಾನದ ಕೊರತೆಯ ನಡುವೆಯೂ ಸ್ಟಾರ್ ಕಲಾವಿದರನ್ನು ಕರೆಸಲು ಮುಂದಾಗಿದ್ದು, 1 ಕೋಟಿ ರೂ. ಖರ್ಚಾಗಲಿದೆ. ಹೀಗಾಗಿ, ದೊಡ್ಡ ಮಟ್ಟದ ದೇಣಿಗೆ ಸಂಗ್ರಹ ಅನಿವಾರ್ಯವಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಉದ್ಯಮಿಗಳಾಗಲಿ, ರಾಜಕಾರಣಿಗಳಾಗಲಿ ದೇಣಿಗೆ ನೀಡಲು ಮುಂದಾಗದ ಕಾರಣ ಮುಜರಾಯಿ ದೇವಸ್ಥಾನದ ಹಣಕ್ಕೆ ಬೇಡಿಕೆ ಇಡಲಾಗಿದೆ.
ಪ್ರತಿ ವರ್ಷ ಕದಂಬೋತ್ಸವ ಹಾಗೂ ಕರಾವಳಿ ಉತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನದ ಜತೆ ಖಾಸಗಿ ಉದ್ಯಮಿಗಳ ದೇಣಿಗೆ ಸಂಗ್ರಹಿಸಿ ಆಚರಿಸಲಾಗುತ್ತಿತ್ತು. ಆದರೆ, ಅನುದಾನದ ಕೊರತೆ ಹಾಗೂ ಪ್ರವಾಹದ ತೊಂದರೆಯಿಂದಾಗಿ ಈ ಬಾರಿ ಕರಾವಳಿ ಉತ್ಸವ ರದ್ದಾಗಿದೆ. ಕದಂಬೋತ್ಸವ ಆಚರಣೆಗೆ ಮಾತ್ರ ಜಿಲ್ಲಾಡಳಿತ ಮುಂದಾಗಿದ್ದು, ಇದಕ್ಕಾಗಿ ಸರ್ಕಾರದಿಂದ 35 ಲಕ್ಷ ರೂ. ಅನುದಾನ ಬಂದಿದೆ. ಈ ಅನುದಾನ ಸಾಲುತ್ತಿಲ್ಲವಾದ್ದರಿಂದ ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ತನ್ನದೇ ಇಲಾಖೆಯ ಸುಪರ್ದಿಯಲ್ಲಿರುವ ಮುಜರಾಯಿ ದೇವಸ್ಥಾನದ ಹುಂಡಿಗೆ ಕೈ ಹಾಕಿದೆ. ಭಕ್ತರು ದೇವಾಲಯಗಳಿಗೆ ನೀಡುವ ದೇಣಿಗೆ ಹಣ ಉತ್ಸವದಲ್ಲಿ ಮೋಜುಮಸ್ತಿ ಮಾಡಲು ಬಳಸಲು ಮುಂದಾಗಿರುವುದು ಖಂಡನೀಯ. | ಹೆಸರು ಹೇಳಲಿಚ್ಛಿಸದ ಮುಜರಾಯಿ ದೇವಾಲಯ ಸಮಿತಿ ಅಧ್ಯಕ್ಷ
ರಾಜ್ಯಮಟ್ಟದ ಉತ್ಸವವಾದ ಕದಂಬೋತ್ಸವ ಆಚರಣೆಗೆ ಅನುದಾನದ ದೃಷ್ಟಿಯಿಂದ ಎಲ್ಲ ಇಲಾಖೆಗಳ ಸಹಕಾರ ಪಡೆಯಲಾಗುತ್ತಿದೆ. ಅದೇ ರೀತಿ ಸಚಿವರು, ಇಲಾಖೆ ಹಿರಿಯ ಅಧಿಕಾರಿಗಳ ನಿರ್ದೇಶನ ಪ್ರಕಾರ ಮುಜರಾಯಿ ಇಲಾಖೆಯ ಸಹಯೋಗ ಪಡೆಯಲಾಗುತ್ತಿದೆ. | ಕೆ.ಹರೀಶಕುಮಾರ ಜಿಲ್ಲಾಧಿಕಾರಿ- ಉತ್ತರ ಕನ್ನಡ