ಮುಚ್ಚಿದ ಉಡುಪಿ ಜಿಲ್ಲೆ ಗಡಿ

11sirsi1
Published on


ಕಾರವಾರ: ಉಡುಪಿ ಗಡಿಯನ್ನು ಅಲ್ಲಿನ ಜಿಲ್ಲಾಡಳಿತ ಭದ್ರ ಮಾಡಿದ್ದು, ಜಿಲ್ಲೆಗೆ ಆರೋಗ್ಯ ಸೇವೆಯೂ ದೊರೆಯದಂತಾಗಿದೆ. ಭಟ್ಕಳದಲ್ಲಿ ಕರೊನಾ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಇಲ್ಲಿಂದ ಬರುವವರನ್ನು ಪಡೆದಲ್ಲಿ ಸಮಸ್ಯೆಯಾದೀತು ಎಂಬ ಕಾರಣಕ್ಕೆ ಉಡುಪಿ ಜಿಲ್ಲಾಧಿಕಾರಿ ಈ ನಿರ್ಣಯ ಕೈಗೊಂಡಿದ್ದಾರೆ.

ಉತ್ತರ ಕನ್ನಡಲ್ಲಿ ಸೂಪರ್ ಸ್ಪೆಷಾಲಿಟಿ ಸೇವೆ ಇಲ್ಲದ ಕಾರಣ ಇಲ್ಲಿನ ಜನ ಪಕ್ಕದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳನ್ನು ನೆಚ್ಚಿಕೊಂಡಿದ್ದಾರೆ. ಆದರೆ, ಅಲ್ಲಿನ ಆಡಳಿತಗಳು ಜಿಲ್ಲೆಯವರನ್ನು ಪಡೆಯಲು ಹಿಂಜರಿಯುತ್ತಿರುವುದು ದಿನದಿಂದ ದಿನಕ್ಕೆ ಸಮಸ್ಯೆ ಗಂಭೀರವಾಗಲು ಕಾರಣವಾಗಿದೆ. ಉತ್ತರ ಕನ್ನಡ ಜಿಲ್ಲಾಧಿಕಾರಿ, ಎಸ್​ಪಿ ಪಾಸ್ ಪಡೆದು ಹೋದರೂ ಆಂಬುಲೆನ್ಸ್​ಗಳ ಪ್ರವೇಶಕ್ಕೆ ಭಟ್ಕಳ ಶಿರೂರು ಗಡಿಯಲ್ಲಿ ಅವಕಾಶ ನೀಡುತ್ತಿಲ್ಲ. ಕರೊನಾ ಇಲ್ಲದ ಬಗ್ಗೆ ಪ್ರಮಾಣಪತ್ರ ಪಡೆದು ಬಂದಲ್ಲಿ ಮಾತ್ರ ಬಿಡಲಾಗುವುದು ಎಂದು ಹೇಳುತ್ತಿದ್ದಾರೆ. ಕಾರವಾರದಿಂದ ಮಂಗಳೂರಿಗೆ ತಮ್ಮ ತಾಯಿಯನ್ನು ಚಿಕಿತ್ಸೆಗೆ ಕರೆದೊಕೊಂಡು ಹೋಗಿದ್ದ ಕಿರಣ್ ಎಂಬ ವ್ಯಕ್ತಿಯೊಬ್ಬರು ಉಡುಪಿ ಜಿಲ್ಲೆ ಪ್ರವೇಶ ಸಿಗದೇ ಸಂಕಷ್ಟಕ್ಕೀಡಾಗಿದ್ದಾರೆ. ಈ ಕುರಿತು, ಅವರು ತಮ್ಮ ಸಂಕಷ್ಟ ಹೇಳಿಕೊಂಡ ವಿಡಿಯೋ ವೈರಲ್ ಆಗಿದೆ. ಕಿಡ್ನಿ ಸಮಸ್ಯೆ ಹಾಗೂ ಮಧುಮೇಹ ಇರುವ ವೃದ್ಧೆಯನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು.

ಪಾಸ್​ಗೆ ವಿಳಂಬ: ಲಾಕ್​ಡೌನ್ ಮುಂದುವರಿಯುವ ಲಕ್ಷಣದ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ಪಾಸ್​ಗಾಗಿ ಭಾರಿ ಒತ್ತಡ ಬರುತ್ತಿದೆ. ಜಿಲ್ಲೆಯಿಂದ ಹೊರ ಹೋಗಲು, ಜಿಲ್ಲೆಯೊಳಗೆ ವಿವಿಧ ಸ್ಥಳಗಳಿಗೆ ಓಡಾಡಲು ಪಾಸ್ ಬೇಕು ಎಂದು ಕೇಳಿಕೊಂಡು ಕಚೇರಿಗೆ ಬರುವವರ ಸಂಖ್ಯೆ ಹೆಚ್ಚಿದ್ದು, ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ವಶೀಲಿ, ಒತ್ತಡದ ನಡುವೆ ಗಂಭೀರ ಸಮಸ್ಯೆ ಇದ್ದವರಿಗೂ ಪಾಸ್ ನೀಡಲು ವಿಳಂಬ ಉಂಟಾಗುತ್ತಿದೆ. ಪಾಸ್ ನೀಡುವ ವ್ಯವಸ್ಥೆ ಇಷ್ಟು ದಿನ ತಹಸೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಹಂತದಲ್ಲಿತ್ತು. ಈಗ ಅದನ್ನು ಪೊಲೀಸ್ ಇಲಾಖೆಗೆ ವರ್ಗಾಯಿಸಲಾಗಿದೆ. ತುರ್ತು ಆರೋಗ್ಯ ಸಮಸ್ಯೆ, ಶವ ಸಾಗಣೆ ಮುಂತಾದ ಕಾರ್ಯಕ್ಕಾಗಿ ಅರ್ಜಿ ಸಲ್ಲಿಸಿದರೂ ಅನುಮತಿ ನೀಡಲು ಒಂದೆರಡು ದಿನ ಕಳೆಯುತ್ತಿದೆ ಎಂದು ಹಲವರು ಅಳಲು ತೋಡಿಕೊಂಡಿದ್ದಾರೆ.

ಆಸ್ಪತ್ರೆ ಬೇಕು ಕೂಗು ಮುನ್ನೆಲೆಗೆ
‘ವಿ ವಾಂಟ್ ಎಮರ್ಜೆನ್ಸಿ ಹಾಸ್ಪಿಟಲ್’ ಎಂಬ ಘೊಷ ವಾಕ್ಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಸಿದ ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ನಡೆದ ಈ ಅಭಿಯಾನ ಭಾರಿ ಸದ್ದು ಮಾಡಿತ್ತು. ನಂತರ ಉದ್ಯಮಿ ಬಿ.ಆರ್.ಶೆಟ್ಟಿ ಕುಮಟಾದಲ್ಲಿ ಆಸ್ಪತ್ರೆ ನಿರ್ವಣಕ್ಕೆ ಮುಂದೆ ಬಂದಿದ್ದರು. ಕ್ರಿಮ್ಸ್​ನಲ್ಲಿಯೂ ಸೂಪರ್ ಸ್ಪೆಷಾಲಿಟಿ ಸೇವೆ ನೀಡುವ ಭರವಸೆ ಸರ್ಕಾರದಿಂದ ಸಿಕ್ಕಿತ್ತು. ಆದರೆ, ಭರವಸೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇಂಥ ತುರ್ತು ಸಂದರ್ಭದಲ್ಲಿ ಸೂಪರ್ ಸ್ಪೆಷಾಲಿಟಿ ಸೇವೆಗಳ ಮಹತ್ವ ಈಗ ಅರಿವಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ರಾಹುಲ್ ಸುರೇಶ ನಾಯ್ಕ ಕೋರಿಕೊಂಡಿದ್ದಾರೆ.

ಉಡುಪಿ ಜಿಲ್ಲಾಡಳಿತ ಪೊಲೀಸರು ಆಂಬುಲೆನ್ಸ್​ಗಳನ್ನು ತಡೆಯುತ್ತಿದ್ದಾರೆ. ನಾವು ಅವರೊಟ್ಟಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಯತ್ನಿಸುತ್ತಿದ್ದೇವೆ. | ಶಿವ ಪ್ರಕಾಶ ದೇವರಾಜು ಎಸ್​ಪಿ ಉತ್ತರ ಕನ್ನಡ

ಉತ್ತರ ಕನ್ನಡದಲ್ಲಿಯೂ ಆರೋಗ್ಯ ಸೇವೆ ಲಭ್ಯವಿದೆ. ಸಣ್ಣಪುಟ್ಟ ಸಮಸ್ಯೆಗಳ ಸಂದರ್ಭದಲ್ಲೂ ಪಕ್ಕದ ಜಿಲ್ಲೆಯ ಆಸ್ಪತ್ರೆಗಳಿಗೆ ಹೋಗುವ ಮನಸ್ಥಿತಿಯನ್ನು ಜಿಲ್ಲೆಯ ಜನ ಕೈಬಿಡಬೇಕು. ಗಂಭೀರ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಉಡುಪಿ ಜಿಲ್ಲಾಡಳಿತ ಸಹಕರಿಸುತ್ತಿದೆ. | ಡಾ. ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ, ಉತ್ತರ ಕನ್ನಡ

ಜಿಲ್ಲೆಯ ಆರೋಗ್ಯ ವ್ಯವಸ್ಥೆ ಸಮರ್ಪಕವಾಗಿಲ್ಲ. ಇದಕ್ಕಾಗಿ ಜಿಲ್ಲೆಯ ಜನ ಹೊರ ಜಿಲ್ಲೆಗಳಿಗೆ ತೆರಳುವುದು ಸಾಮಾನ್ಯ. ಅದಕ್ಕಾಗಿ ಪಾಸ್ ಪಡೆಯಲು ಓಡಾಡುತ್ತ ಹೋದರೆ, ಜೀವವೇ ಹೋಗಬಹುದು. ಇದನ್ನು ಅರ್ಥ ಮಾಡಿಕೊಂಡು ಗಂಭೀರ ಸಮಸ್ಯೆ ಇರುವವರಿಗೆ ಪಾಸ್ ನೀಡುವ ವ್ಯವಸ್ಥೆ ಮಾಡಬೇಕು. | ಆನಂದ ಅಸ್ನೋಟಿಕರ್ ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net