

ಎಚ್.ಡಿ.ಕೋಟೆ: ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ಅರಣ್ಯ ವಲಯದ ಅರಣ್ಯಾಧಿಕಾರಿ ಎಸ್.ಎಸ್.ಸಿದ್ದರಾಜು ಅವರು 2024ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಕಳೆದ ಐದು ವರ್ಷಗಳಿಂದ ತಾಲೂಕಿನ ಅಂತರಸಂತೆ ಅರಣ್ಯ ವಲಯಕ್ಕೆ ನಿಯೋಜನೆಗೊಂಡು ಕೆಲಸ ನಿರ್ವಹಿಸುತ್ತಿರುವ ಅವರು, ದಮ್ಮನಕಟ್ಟೆ ಸಫಾರಿ ಕೇಂದ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಕಾರಾಪುರ ಗ್ರಾಮದ ಬಾವಿಯೊಂದಕ್ಕೆ ಚಿರತೆ ಆಕಸ್ಮಿಕವಾಗಿ ಬಿದ್ದು ಸಾವು ಬದುಕಿನೊಡನೆ ಹೋರಾಟ ನಡೆಸುತ್ತಿದ್ದ ಚಿರತೆಯನ್ನು ರಕ್ಷಿಸಲು ಸಿದ್ದರಾಜು ಅವರು ತಮ್ಮ ಜೀವದ ಹಂಗು ತೊರೆದು ಬೋನಿನೊಳಗೆ ಕುಳಿತು ಬಾವಿಯೊಳಗೆ ಇಳಿದು ಚಿರತೆ ರಕ್ಷಣೆ ಮಾಡಿ ತಾಲೂಕಿನಲ್ಲಿ ಮನೆ ಮಾತಾಗಿದ್ದರು.
ಇವರು ದಮ್ಮನಕಟ್ಟೆ ಸಫಾರಿ ಕೇಂದ್ರಕ್ಕೆ ಅಧಿಕಾರಿಯಾಗಿ ನಿಯೋಜನೆಗೊಂಡ ನಂತರ ಸಫಾರಿ ಕೇಂದ್ರದಲ್ಲಿ ಮೂಲ ಸೌಕರ್ಯ ಒದಗಿಸಲು ಸಾಕಷ್ಟು ಕೆಲಸ ಮಾಡಿದ್ದಾರೆ. ಪ್ರವಾಸಿಗರ ಅನುಕೂಲಕ್ಕೆ ಮತ್ತು ಅವರ ಅಭಿಲಾಷೆಗೆ ತಕ್ಕಂತೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಾರ್ಪಾಡು ಮಾಡಿ ಜನಮನ್ನಣೆಗೆ ಪಾತ್ರರಾಗಿ ಉತ್ತಮ ಅಧಿಕಾರಿಯಾಗಿ ಹೆಸರು ಮಾಡಿದ್ದಾರೆ. ಸಿದ್ದರಾಜು ಅವರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿರುವುದು ತಾಲೂಕಿಗೆ ಕೀರ್ತಿ ತಂದಿದೆ ಎಂದು ಪ್ರವಾಸಿಗ ಗ್ಯಾಸ್ ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.