ಮುಂಬೈನಲ್ಲಿ ಮಾವು ಮಾರಿ ಕರೊನಾ ತಂದ!

11-hvr-01
Published on

ಹಾವೇರಿ: ಕರೊನಾ ಮಹಾಮಾರಿ ಜಿಲ್ಲೆಯಲ್ಲಿ ನಿಧಾನವಾಗಿ ವ್ಯಾಪಿಸಲು ಆರಂಭಿಸಿದ್ದು, ಒಂದು ವಾರದ ಅವಧಿಯಲ್ಲಿ ಮೂವರಲ್ಲಿ ಸೋಂಕು ಪತ್ತೆಯಾಗಿ ಜನರಲ್ಲಿ ಭೀತಿ ತಲೆದೋರಿದೆ.

ಮೂರನೇ ಪಾಸಿಟಿವ್ ಪ್ರಕರಣ ಶಿಗ್ಗಾಂವಿ ತಾಲೂಕುನ ಅಂದಲಗಿಯ 25 ವರ್ಷದ ಹಣ್ಣಿನ ವ್ಯಾಪಾರಿಯಲ್ಲಿ (ಪಿ 853) ಕಾಣಿಸಿಕೊಂಡಿದೆ. ಮೊದಲ ಪಾಸಿಟಿವ್ ಪ್ರಕರಣ ಸವಣೂರಿನ 32 ವರ್ಷದ ವ್ಯಕ್ತಿಯಲ್ಲಿ (ಪಿ 639) ಕಳೆದ ಸೋಮವಾರ (ಮೇ 4) ಪತ್ತೆಯಾಗಿತ್ತು. ಅದಾದ ಮರುದಿನ ಈತನ ಸಹೋದರನಲ್ಲಿ (ಪಿ 672) ಸೋಂಕು ದೃಢಪಟ್ಟಿತ್ತು. ಇದರ ನಂತರ ಭಾನುವಾರದವರೆಗೆ ಜಿಲ್ಲೆಯಲ್ಲಿ ಯಾರಲ್ಲೂ ಸೋಂಕು ಕಂಡುಬಂದಿರಲಿಲ್ಲ. ಇದರಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.

ಅಂದಲಗಿ ಗ್ರಾಮದಲ್ಲಿನ ಸೋಂಕಿತನ ಮನೆಯಿಂದ 300 ಮೀಟರ್ ಪ್ರದೇಶವನ್ನು ಸೀಲ್​ಡೌನ್ ಮಾಡಲಾಗಿದೆ. 7 ಕಿ.ಮೀ. ವ್ಯಾಪ್ತಿ ಪ್ರದೇಶವನ್ನು ಬಫರ್​ಜೋನ್ ಎಂದು ಗುರುತಿಸಲಾಗಿದೆ. ಸವಣೂರ ಉಪವಿಭಾಗಾಧಿಕಾರಿಯನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ. ಅಗತ್ಯ ವಸ್ತುಗಳನ್ನು ಇವರ ಸೂಚನೆ ಮೇರೆಗೆ ಪೂರೈಸಲಾಗುತ್ತಿದೆ. ಈ ಪ್ರದೇಶದ ಒಳ ಹಾಗೂ ಹೊರ ಹೋಗುವ ಮಾರ್ಗಗಳನ್ನೆಲ್ಲ ಬಂದ್ ಮಾಡಲಾಗಿದೆ.

ಈತನಿಗೂ ಮುಂಬೈ ನಂಟು: ಮೊದಲೆರಡು ಪಾಸಿಟಿವ್ ಪ್ರಕರಣಗಳು ಮುಂಬೈನಿಂದ ಬಂದವರಲ್ಲಿ ಪತ್ತೆಯಾಗಿತ್ತು. 3ನೇ ಪಾಸಿಟಿವ್ ವ್ಯಕ್ತಿಯೂ ಜಿಲ್ಲೆಯಿಂದ ಮುಂಬೈಗೆ ಹೋಗಿ ಬಂದಿದ್ದರಿಂದ ಸೋಂಕು ಹರಡಿದೆ. ಅಂದಲಗಿ ಗ್ರಾಮದಿಂದ ಮಾವಿನಹಣ್ಣು ವ್ಯಾಪಾರಕ್ಕಾಗಿ ಮಿನಿ ಲಾರಿಯನ್ನು ಚಾಲನೆ ಮಾಡಿಕೊಂಡು ಮೂರು ಬಾರಿ ಮುಂಬೈನ ವಾಸಿ ಪ್ರದೇಶದಲ್ಲಿರುವ ಎಪಿಎಂಸಿಗೆ ಹೋಗಿ ಬಂದಿದ್ದಾನೆ. ಈತನ ಪ್ರಾಥಮಿಕ ಸಂಪರ್ಕಕ್ಕೆ ಬಂದವರಲ್ಲಿ ಈಗಾಗಲೇ 16 ಜನರನ್ನು ಗುರುತಿಸಲಾಗಿದ್ದರೆ, ದ್ವಿತೀಯ ಸಂಪರ್ಕಕ್ಕೆ ಬಂದ 23 ಜನರನ್ನು ಗುರುತಿಸಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಇನ್ನುಳಿದ ಪ್ರಾಥಮಿಕ ಹಾಗೂ ದ್ವಿತೀಯ ಸಂರ್ಪತರನ್ನು ಪತ್ತೆ ಹಚ್ಚುವ ಕಾರ್ಯ ಚಾಲ್ತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಫಿವರ್ ಕ್ಲಿನಿಕ್ ಆರಂಭ: ಅಂದಲಗಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಉರ್ದು ಪ್ರಾಥಮಿಕ ಶಾಲೆಯನ್ನು ಕ್ವಾರಂಟೈನ್ ಹಾಗೂ ಫಿವರ್ ಕ್ಲಿನಿಕ್ ಕೇಂದ್ರವನ್ನಾಗಿ ರೂಪಿಸಲಾಗಿದೆ. ಸೋಂಕು ಪತ್ತೆಯಾಗಿರುವ ವ್ಯಕ್ತಿಯ ಸಂಪರ್ಕಕ್ಕೆ ಬಂದವರು ಕೂಡಲೆ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆ, ಕೋಣನಕೆರೆ ಆರೋಗ್ಯ ಕೇಂದ್ರ ಇಲ್ಲವೇ ಬಂಕಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

ಹಳ್ಳಿಗೂ ವ್ಯಾಪಿಸಿದ ಸೋಂಕು: ಇದುವರೆಗೆ ಪಟ್ಟಣದಲ್ಲಿ ಮಾತ್ರ ಇದ್ದ ಸೋಂಕು ಈಗ ಅಂದಲಗಿಯ ವ್ಯಕ್ತಿಗೆ (ಪಿ 853) ಕಾಣಿಸಿಕೊಳ್ಳುವ ಮೂಲಕ ಹಳ್ಳಿಗೂ ವ್ಯಾಪಿಸಿದಂತಾಗಿದೆ. ಹಳ್ಳಿಗಳು ಸೋಂಕು ಮುಕ್ತವಾಗಿರಲೆಂದು ಗ್ರಾಮಸ್ಥರು ಕಳೆದ ಒಂದೂವರೆ ತಿಂಗಳಿನಿಂದ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ. ಆದರೆ, ಅವರೆಲ್ಲ ಈವರೆಗೆ ಗ್ರಾಮಕ್ಕೆ ಹೊರಗಿನಿಂದ ಬಂದವರ ಮೇಲೆ ಮಾತ್ರ ಹೆಚ್ಚಿನ ನಿಗಾ ವಹಿಸುತ್ತಿದ್ದರು. ಗ್ರಾಮದಲ್ಲಿಯೇ ಇದ್ದುಕೊಂಡು ಹೊರಗೆ ಹೋಗಿ ಒಳಗೆ ಬರುವವರತ್ತ ಲಕ್ಷ್ಯ ವಹಿಸಿರಲಿಲ್ಲ. ಇದರ ಪರಿಣಾಮ ಅಂದಲಗಿ ಗ್ರಾಮಕ್ಕೂ ಸೋಂಕು ಹರಡುವಂತಾಗಿದೆ. ಈ ಪ್ರಕರಣದಿಂದ ಗ್ರಾಮದಲ್ಲಿ ಭೀತಿಯ ವಾತಾವರಣ ಮನೆ ಮಾಡಿದೆ.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net