

ಕಾರವಾರ/ಭಟ್ಕಳ: ಜಿಲ್ಲೆಯಲ್ಲಿ ಗುರುವಾರ 17 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಭಟ್ಕಳದ 11, ಅಂಕೋಲಾ, ಕುಮಟಾ, ಯಲ್ಲಾಪುರ, ಮುಂಡಗೋಡು, ದಾಂಡೇಲಿ ಹಾಗೂ ಹಳಿಯಾಳದ ತಲಾ ಒಬ್ಬರಿಗೆ ರೋಗ ಖಚಿತವಾಗಿದೆ. ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 117ಕ್ಕೆ ಏರಿಕೆಯಾಗಿದೆ.
ಜೂನ್ 13ರಂದು ದುಬೈನಿಂದ ವಾಪಸಾಗಿದ್ದ 184 ಜನರನ್ನು ಹೋಟೆಲ್ ಕ್ವಾರಂಟೈನ್ ಮಾಡಿ ಗಂಟಲ ದ್ರವದ ಮಾದರಿ ಪರೀಕ್ಷೆ ಮಾಡಲಾಗಿತ್ತು. ಅವರ ಕ್ವಾರಂಟೈನ್ ಅವಧಿ ಮುಕ್ತಾಯವಾದ ನಂತರ ಎರಡನೇ ಹಂತದ ಪರೀಕ್ಷೆಯಲ್ಲಿ 9 ಜನರಿಗೆ ರೋಗ ಇರುವುದು ಖಚಿತವಾಗಿದೆ. ಹಲವರು ಮನೆಗೆ ಹೋಗಿ ತಮ್ಮವರ ಸಂಪರ್ಕಕ್ಕೆ ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ. ಚೆನ್ನೈನಿಂದ ವಾಪಸಾಗಿದ್ದ ಭಟ್ಕಳದ 30 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ನರ್ಸ್ಗಳಿಗೂ ಸೋಂಕು: ಖಾಸಗಿ ಆಸ್ಪತ್ರೆಯ 41 ವರ್ಷದ ನರ್ಸ್ಗೆ (ಯುಕೆ-290)ಕರೊನಾ ಖಚಿತವಾಗಿದೆ. ಅವರು ಸೋಂಕಿತ 12047 ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ. ಮನೆಗಳಿಗೆ ತೆರಳಿ ಪ್ರಾಥಮಿಕ ಚಿಕಿತ್ಸೆ ನೀಡುತ್ತಿದ್ದ ಕಾರಣ ಅವರ ಟ್ರಾವೆಲ್ ಹಿಸ್ಟರಿ ಸಂಗ್ರಹಿಸುವುದು ಆರೋಗ್ಯಾಧಿಕಾರಿಗಳಿಗೆ ಸವಾಲಾಗಿದೆ. ಅವರು ಕಾರ್ಯ ನಿರ್ವಹಿಸುತ್ತಿದ್ದ ಖಾಸಗಿ ಆಸ್ಪತ್ರೆಯನ್ನು ಸೀಲ್ಡೌನ್ ಮಾಡಲಾಗಿದೆ.
ಪುಣೆಯಿಂದ ಜೂನ್ 27ರಂದು ಬಂದಿದ್ದ ಮುಂಡಗೋಡಿನ 24 ವರ್ಷದ ಖಾಸಗಿ ಆಸ್ಪತ್ರೆಯ ನರ್ಸ್ಗೆ ರೋಗ ಇರುವುದು ಖಚಿತವಾಗಿದೆ. ಮುರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಅವರು ಕ್ವಾರಂಟೈನ್ನಲ್ಲಿದ್ದರು.
ಇನ್ನಿಬ್ಬರಿಗೆ ಸೋಂಕು: ಮಂಗಳೂರು ಬಂದರಿನಿಂದ ಆಗಮಿಸಿದ ಅಂಕೋಲಾ ಅಗ್ರಗೋಣದ 50 ವರ್ಷದ ಸೋಂಕಿತ (ಪಿ-10648) ಸಂಪರ್ಕಕ್ಕೆ ಬಂದ ಕುಮಟಾದ 35 ವರ್ಷದ ಮಹಿಳೆ ಹಾಗೂ ಅಂಕೋಲಾದ 71 ವರ್ಷದ ವೃದ್ಧನಿಗೆ ಸೋಂಕು ಖಚಿತವಾಗಿದೆ. ಒಟ್ಟಾರೆ ಒಬ್ಬ ವ್ಯಕ್ತಿಯಿಂದ 14 ಜನರಿಗೆ ರೋಗ ಹರಡಿದಂತಾಗಿದೆ.
ಮಹಾರಾಷ್ಟ್ರ ನಂಟು: ಮುಂಬೈನಿಂದ ವಾಪಸಾದ ದಾಂಡೇಲಿ ಪಟೇಲ್ ನಗರದ 24 ವರ್ಷದ ಗರ್ಭಿಣಿಗೆ ಸೋಂಕು ದೃಢಪಟ್ಟಿದೆ. ಆಕೆಯ ಪತಿಗೆ ಕೆಲ ದಿನಗಳ ಹಿಂದೆಯೇ ರೋಗ ಕಾಣಿಸಿಕೊಂಡಿತ್ತು. ಕುಟುಂಬದ ಜತೆ ವಾಪಸಾಗಿದ್ದ ಹಳಿಯಾಳದ ಬಾಳಶೆಟ್ಟಿಕೊಪ್ಪದ 2 ವರ್ಷದ ಹೆಣ್ಣು ಮಗು, ಥಾಣೆಯಿಂದ ವಾಪಸಾದ 68 ವರ್ಷದ ವೃದ್ಧೆಯಲ್ಲಿ ಸೋಂಕು ಕಂಡುಬಂದಿದೆ.
ಕಳ್ಳತನ ಆರೋಪಿ ಬಿಡುಗಡೆ: ಕರೊನಾ ವಾರ್ಡ್ನಿಂದ ಎರಡು ಬಾರಿ ತಪ್ಪಿಸಿಕೊಂಡಿದ್ದ ಕಳ್ಳತನದ ಆರೋಪಿ ಕರೊನಾದಿಂದ ಗುಣ ಹೊಂದಿದ್ದು, ಗುರುವಾರ ಬಿಡುಗಡೆ ಮಾಡಲಾಗಿದೆ. ಆತನನ್ನು ಪೊಲೀಸ್ ಆತಿಥ್ಯದಲ್ಲಿ ಆಂಬುಲೆನ್ಸ್ನಲ್ಲಿ ಶಿರಸಿಗೆ ಬಿಡಲಾಗಿದೆ. ಆತನಿಗೆ ಜಾಮೀನು ಸಿಕ್ಕಿದೆ. ಕರೊನಾದಿಂದ ಗುಣ ಹೊಂದಿದ್ದರಿಂದ ಕ್ವಾರಂಟೈನ್ ಕೂಡ ಇಲ್ಲ. ಮನೆಗೆ ಕಳಿಸಲಾಗುವುದು ಎಂದು ಎಸ್ಪಿ ಶಿವಪ್ರಕಾಶ ದೇವರಾಜು ತಿಳಿಸಿದ್ದಾರೆ. ಬೈಕ್ ಕಳ್ಳತನದ ಆರೋಪದ ಮೇಲೆ ಶಿರಸಿ ಪೊಲೀಸರಿಂದ ಬಂಧಿತನಾದ ಆತನಿಗೆ ಕರೊನಾ ಇರುವುದು ಖಚಿತವಾಗಿತ್ತು. ಇದರಿಂದ ಕಾರವಾರ ಕ್ರಿಮ್್ಸ ಆಸ್ಪತ್ರೆಗೆ ಸಾಗಿಸಿದಾಗ ಎರಡು ಬಾರಿ ನಾಪತ್ತೆಯಾಗಿ ಎಲ್ಲರಿಗೂ ಆತಂಕ ಮೂಡಿಸಿದ್ದ.
ಮದ್ಯಕ್ಕಾಗಿ ಸಾಲು: ಇಲ್ಲಿನ ಕದಂಬ ನೌಕಾನೆಲೆ ಆವರಣದ ನೇವಿ ಕ್ಯಾಂಟೀನ್ನಲ್ಲಿ ಮದ್ಯ ಪಡೆಯಲು ಕಳೆದ ಎರಡು ದಿನಗಳಿಂದ ಸರದಿಯ ಸಾಲು ಕಂಡುಬರುತ್ತಿದೆ. ನೌಕಾನೆಲೆಯ ಸೈನಿಕರಿಗೆ ಹಾಗೂ ನಿವೃತ್ತ ಸೈನಿಕರಿಗೆ ಇಲ್ಲಿ ರಿಯಾಯಿತಿ ದರದಲ್ಲಿ ಸಾಮಗ್ರಿಗಳು, ಮದ್ಯ ದೊರೆಯಲಿವೆ. ಇಷ್ಟು ದಿನ ಕ್ಯಾಂಟೀನ್ನಲ್ಲಿ ಮದ್ಯ ಮಾರಾಟ ಬಂದ್ ಮಾಡಲಾಗಿತ್ತು. ಈಗ ಮರು ಪ್ರಾರಂಭಿಸುತ್ತಿದ್ದಂತೆ ಪ್ರತಿ ದಿನ ಬೆಳಗ್ಗೆ 300 ಕ್ಕೂ ಅಧಿಕ ಜನ ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಪರಸ್ಪರ ಅಂತರವಿಲ್ಲದೆ, ಸರದಿಯಲ್ಲಿ ನಿಲ್ಲುತ್ತಿದ್ದು, ಕರೊನಾ ಆತಂಕ ಉಂಟಾಗಿದೆ ಎಂಬುದು ಕೆಲ ಉದ್ಯೋಗಿಗಳ ದೂರು.
ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ
ಹಳಿಯಾಳ: ಸ್ಥಳೀಯ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ಕರೊನಾ ರೋಗಿಗಳ ಸಹಾಯಾರ್ಥ ತಮ್ಮ ಒಂದು ದಿನದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.
ಮಹಾವಿದ್ಯಾಲಯದ ಡಾ. ವಿ.ವಿ. ಕಟ್ಟಿ ಅವರ ನೇತೃತ್ವದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರ ಬಳಗ ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ 1,98,487 ರೂ.ಚೆಕ್ ಅನ್ನು ಗುರುವಾರ ಹಸ್ತಾಂತರಿಸಿದರು.
ಡಾ. ಸಮೀರ ಗಲಗಲಿ, ಪೊ›.ಎಸ್.ಡಿ. ಕುಲಕರ್ಣಿ, ಪೊ›.ವಿ.ಎಂ. ಚೌಗುಲಾ, ಪೊ›. ಮಂಜುನಾಥ ಡಿ, ಪೊ›.ಅಭಯಕುಮಾರ ಇಂಚಲ, ಪೊ› ವಿಜೇತ್ ಸ್ವಾದಿ, ಗ್ರಂಥಾಲಯ ಪಾಲಕ ಸುನೀಲ ಯರಗಟ್ಟಿ ಉಪಸ್ಥಿತರಿದ್ದರು.
ಪ್ರತ್ಯೇಕ ಫೀವರ್ ಕ್ಲಿನಿಕ್ಗೆ ಆಗ್ರಹ
ಗೋಕರ್ಣ: ಗೋಕರ್ಣಕ್ಕೆ ಹೊಂದಿಕೊಂಡಿರುವ ಅಂಕೋಲಾ ತಾಲೂಕಿನ ಅಗ್ರಗೋಣದಲ್ಲಿ ಕರೊನಾ ಪ್ರಕರಣ ದೃಢಪಟ್ಟಿದ್ದರಿಂದ ಗೋಕರ್ಣದ ಖಾಸಗಿ ಕ್ಲಿನಿಕ್ನಲ್ಲಿ ಜ್ವರ ಪೀಡಿತರಿಗೆ ಚಿಕಿತ್ಸೆ ನೀಡಲು ಹಿಂಜರಿಯುತ್ತಿದ್ದು 30 ಕಿ.ಮೀ. ದೂರದ ಕುಮಟಾ ಆಸ್ಪತ್ರೆಗೆ ಕಳಿಸಲಾಗುತ್ತಿದೆ.
ಸ್ಥಳೀಯರ ಹೊರತಾಗಿ ಅಂಕೋಲಾ ತಾಲೂಕಿನ ಅಗ್ರಗೋಣ ಮತ್ತು ಸಗಡಗೇರಿ ಗ್ರಾಪಂ ವ್ಯಾಪ್ತಿಯ ಹೆಚ್ಚಿನವರು ಗೋಕರ್ಣದಲ್ಲಿ ಚಿಕಿತ್ಸೆ ಪಡೆಯುವುದು ಸಾಮಾನ್ಯ. ಜತೆಗೆ ಬೆಂಗಳೂರು ಮತ್ತೆ ಲಾಕ್ಡೌನ್ ಆಗಲಿದೆ ಎಂಬ ವದಂತಿಯಿಂದಾಗಿ ಒಂದು ವಾರದಿಂದ ಗೋಕರ್ಣಕ್ಕೆ ವಾಪಸಾಗುವವರ ಸಂಖ್ಯೆ ಹೆಚ್ಚಾಗಿದೆ. ಸರ್ಕಾರಿ ನಿಯಮದ ಪ್ರಕಾರ ಸರ್ಕಾರಿ ಬಸ್ನಲ್ಲಿ ಬಂದವರನ್ನು ನೇರವಾಗಿ ತಾಲೂಕು ಆಸ್ಪತ್ರೆಯಲ್ಲಿ ಇಳಿಸಬೇಕೆಂಬ ನಿಯಮವಿದೆ. ಆದರೆ, ಖಾಸಗಿ ವಾಹನದಲ್ಲಿ ಬರುವವರ ಸಂಖ್ಯೆ ಹೆಚ್ಚಿದೆ. ಇಂಥವರು ನೇರವಾಗಿ ತಮ್ಮ ತಮ್ಮ ಮನೆ ಸೇರಿಕೊಳ್ಳುತ್ತಿದ್ದು ಇವರನ್ನು ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸಲು ಆಶಾ ಕಾರ್ಯಕರ್ತೆಯರು ಅವಿರತ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಮೂರು ದಿನದಲ್ಲಿ 50ಕ್ಕೂ ಅಧಿಕ ಜನ ಬೆಂಗಳೂರಿನಿಂದ ಬಂದಿದ್ದಾರೆ. ಇವರ ಸಂಖ್ಯೆ ದಿನೇ ದಿನೆ ಹೆಚ್ಚಾಗುವ ಸಾಧ್ಯತೆ ಇದೆ. ಸೋಮವಾರದಿಂದ ಇಲ್ಲಿಯತನಕ ತದಡಿ ಬಂದರಿನಲ್ಲಿ ನಿರ್ಮಾಣ ಹಂತದಲ್ಲಿರುವ ಮೀನು ಶೈತ್ಯಾಗಾರದಲ್ಲಿ ಕೆಲಸ ಮಾಡಲು ತಂತ್ರಜ್ಞರು ಮತ್ತು ಕಾರ್ವಿುಕರು ಬರುತ್ತಿದ್ದಾರೆ. ಇಂತಹ 15 ಜನರನ್ನು ಪಿಎಚ್ಸಿಯಲ್ಲಿ ಸ್ಕ್ರೀನಿಂಗ್ ಮಾಡಿಸಿ ಕಳುಹಿಸಲಾಗಿದೆ. ಇವರ ಪೈಕಿ ಕೆಲವರು ಆಂಧ್ರದಿಂದ ಆಗಮಿಸಿದ್ದಾರೆ. ಅಲ್ಲದೆ, ನಿತ್ಯ ಗೋಕರ್ಣಕ್ಕೆ ಧಾರ್ವಿುಕ ಕೆಲಸಕ್ಕೆ ಬರುವವರನ್ನು ಮತ್ತು ಪ್ರವಾಸಿಗರನ್ನು ಕೂಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಇವೆಲ್ಲವುಗಳಿಂದ ಇಲ್ಲಿನ ಆರೋಗ್ಯ ಕೇಂದ್ರದ ಮೇಲಿನ ಹೊರೆ ಹೆಚ್ಚಾಗುತ್ತಿದೆ.
ಕ್ಲಿನಿಕ್ ಕೊಡಿ: ಕುಮಟಾ ತಾಲೂಕು ಆಸ್ಪತ್ರೆ ಬಿಟ್ಟರೆ ಇಡೀ ತಾಲೂಕಿನಲ್ಲಿ ಕೋವಿಡ್ ಪರೀಕ್ಷೆ ಮಾಡಬಲ್ಲ ಮತ್ತೊಂದು ಫೀವರ್ ಕ್ಲಿನಿಕ್ ಇಲ್ಲ. ಈ ಹಿನ್ನೆಲೆಯಲ್ಲಿ ಯಾತ್ರಾ ಸ್ಥಳ ಗೋಕರ್ಣದಲ್ಲಿ ಪ್ರತ್ಯೇಕ ಫೀವರ್ ಕ್ಲಿನಿಕ್ ಸೌಲಭ್ಯ ಕಲ್ಪಿಸಬೇಕು ಎಂಬ ಆಗ್ರಹ ಹೆಚ್ಚಾಗಿದೆ. ಇದರಿಂದ ಈ ಭಾಗದ 10ಕ್ಕೂ ಹೆಚ್ಚಿನ ಗ್ರಾಪಂ ವ್ಯಾಪ್ತಿಯ ಜನ ಮತ್ತು ಪ್ರವಾಸಿಗರ ಅಲೆದಾಟ ತಪ್ಪಲಿದೆ.
ಜ್ವರ ಪೀಡಿತರನ್ನು ದೂರದ ಕುಮಟಾಕ್ಕೆ ಕಳುಹಿಸುವುದು ಸರಿಯಾದ ಕ್ರಮವಲ್ಲ. ಕರೊನಾ ಹೆಚ್ಚುತ್ತಿರುವ ಈ ದಿನಗಳಲ್ಲಿ ರೋಗ ಸಂಬಂಧ ಜ್ವರ ತಪಾಸಣೆಗೆ ಪ್ರತ್ಯೇಕ ಫೀವರ್ ಕ್ಲಿನಿಕ್ ಅತಿ ಅಗತ್ಯವಿದೆ. ಜಿಲ್ಲಾಡಳಿತ ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ತಕ್ಷಣ ಈ ಬಗ್ಗೆ ಕ್ರಮಕ್ಕೆ ಮುಂದಾಗಲಿ. | ಪ್ರದೀಪ ನಾಯಕ, ಜಿಪಂ ಸದಸ್ಯ
ಭಟ್ಕಳದಲ್ಲಿ ನಿಯಮ ಬಿಗಿ
ಕಾರವಾರ: ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ನಿಯಮ ಜಾರಿಗೆ ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಆದೇಶಿಸಿದ್ದಾರೆ. ಸಾಯಂಕಾಲ 6 ರಿಂದ ಬೆಳಗ್ಗೆ 6ರವರೆಗೆ ಜನ ಹೊರಗೆ ಓಡಾಡುವಂತಿಲ್ಲ. 70 ವರ್ಷ ಮೇಲ್ಪಟ್ಟ ವೃದ್ಧರು, 10 ವರ್ಷದ ಕೆಳಗಿನ ಮಕ್ಕಳು, ಗರ್ಭಿಣಿಯರು, ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಆರೋಗ್ಯ ಕಾರಣ ಹೊರತುಪಡಿಸಿ ಮನೆಯಿಂದ ಹೊರಗೆ ಬರಬಾರದು. ಪ್ರತಿ ಎರಡು ದಿನಕ್ಕೊಮ್ಮೆ ಫೀವರ್ ಕ್ಲೀನಿಕ್ಗೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಭಟ್ಕಳ ಪುರಸಭೆಯ ಒಳಗೆ ಅಗತ್ಯ ಸಾಮಗ್ರಿಗಳ ಪೂರೈಕೆ ಹೊರತುಪಡಿಸಿ ಸಾರ್ವಜನಿಕರ ಆಗಮನ ಮತ್ತು ನಿರ್ಗಮನವನ್ನು ನಿಯಂತ್ರಿಸಿದೆ. ಅಧಿಕಾರಿಗಳ ಸಮ್ಮುಖದಲ್ಲಿ ಮಾತ್ರ, ಜನ ಸೇರುವೆ ಸಭೆ, ಸಮಾರಂಭ, ಧಾರ್ವಿುಕ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಆದೇಶಿಸಿದ್ದಾರೆ.