ಮುಂಡಿಗೆಕೆರೆಯಲ್ಲಿ ಬಾಣಂತನದ ಸಡಗರ

30SIRSI2
Published on

ಶಿರಸಿ: ತಾಲೂಕಿನ ಸೋಂದಾದ ಬಾಡಲಕೊಪ್ಪ ಮಜಿರೆಯಲ್ಲಿರುವ ಮುಂಡಿಗೆಕೆರೆಯಲ್ಲಿ ಈಗ ಬಾಣಂತನದ ಸಡಗರ. ಆಗತಾನೇ ಕಣ್ಣು ಬಿಟ್ಟು ಜಗತ್ತನ್ನು ನೋಡುತ್ತಿರುವ ಪುಟ್ಟ ಮರಿಗಳು ಚಿಲಿಪಿಲಿ ಕಲರವ ಆರಂಭಿಸಿದೆ. ತಾಯಿ ಹಕ್ಕಿಯು ಮರಿಗೆ ಗುಟುಕು ನೀಡುವ ದೃಶ್ಯಗಳು ನೋಡುಗರನ್ನು ಸೆಳೆಯುತ್ತಿವೆ.

ಬಾಡಲಕೊಪ್ಪದಲ್ಲಿರುವ ಕೆರೆಯ ನಡುವೆ ಮುಂಡಿಗೆ ಸಸ್ಯಗಳು ಇವೆ. ಪ್ರತಿ ವರ್ಷ ಮಳೆಗಾಲದ ಪೂರ್ವದಲ್ಲಿ ಬರುವ ವಲಸೆ ಪಕ್ಷಿಗಳು ಈ ಮುಂಡಿಗೆ ಗಿಡಗಳ ಮೇಲೆ ಗೂಡುಕಟ್ಟಿ, ಸಂತಾನಾಭಿವೃದ್ಧಿ ಮಾಡಿಕೊಂಡು, ಮರಿಗಳೊಂದಿಗೆ ಮರಳಿ ಬಂದಲ್ಲಿಗೆ ಸಾಗುತ್ತವೆ. ಈ ವರ್ಷ ಮೇ ಕೊನೆಯಲ್ಲಿ ಕೆರೆ ಸಮೀಕ್ಷೆ ನಡೆಸಿದ್ದ ಬಾನಾಡಿಗಳು, ಜೂನ್ ಮೊದಲ ವಾರದಲ್ಲಿ ಕೆರೆಗೆ ಇಳಿದಿದ್ದವು. 300ಕ್ಕೂ ಹೆಚ್ಚು ಬೆಳ್ಳಕ್ಕಿಗಳ ತಂಡವೇ ಬಂದು ಸೇರಿತ್ತು. ಅವು ಬಂದು ಗೂಡುಕಟ್ಟಲು ಆರಂಭಿಸಿದ, ಐದಾರು ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗಿದೆ.

ಸಮೀಪದ ಕಾಡಿನಿಂದ ಕಡ್ಡಿಗಳನ್ನು ಹೆಕ್ಕಿ ತಂದು, ಬುಟ್ಟಿಯಾಕಾರದ ಗೂಡುಗಳನ್ನು ಕಟ್ಟಿದ್ದವು. ಅಲ್ಲಿ ಮೊಟ್ಟೆಯಿಟ್ಟು, ಕಾವು ನೀಡಿ, ಈಗ ಮರಿಗಳು ಹೊರಬಂದಿವೆ.

ಮುಂಡಿಗೆ ಗಿಡಗಳ ಮೇಲೆ 160ರಿಂದ 175ರಷ್ಟು ಗೂಡುಗಳು ಇರುವುದು ದೂರದಿಂದ ಗೋಚರಿಸುತ್ತದೆ. ಈಗಲೂ ಹಕ್ಕಿಗಳು ಕಡ್ಡಿಗಳನ್ನು ಹೆಕ್ಕಿ, ಒಯ್ಯುತ್ತಿರುವುದರಿಂದ ಗೂಡುಗಳ ಸಂಖ್ಯೆ ಹೆಚ್ಚಾಗಬಹುದು. | ರತ್ನಾಕರ ಹೆಗಡೆ ಜಾಗೃತ ವೇದಿಕೆ ಪ್ರಮುಖ

ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಪಾರಂಪರಿಕ ಜೀವವೈವಿಧ್ಯ ತಾಣವೆಂದು ಘೊಷಣೆಯಾಗಿರುವ ಮುಂಡಿಗೆಕೆರೆಗೆ ಸಂತಾನಾಭಿವೃಧಿ್ಧೆ ಬರುವ ಬೆಳ್ಳಕ್ಕಿಗಳಿಗೆ ರಕ್ಷಣೆ ನೀಡುವುದು ಅಗತ್ಯವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ತುರ್ತು ಕ್ರಮ ಕೈಗೊಂಡು, ಕಾವಲುಗಾರರನ್ನು ನೇಮಿಸಿ, ಪಕ್ಷಿಗಳಿಗೆ ರಕ್ಷಣೆ ನೀಡಬೇಕು. | ನರಸಿಂಹ ಹೆಗಡೆ ತಾಲೂಕು ಪಂಚಾಯಿತಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net