ಮುಂಡಗೋಡದಲ್ಲಿ ಸ್ವಯಂ ಲಾಕ್​ಡೌನ್

1mnd1
Published on

ಮುಂಡಗೋಡ: ತಾಲೂಕಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ವರ್ತಕರು ಸ್ವಯಂ-ಪ್ರೇರಣೆಯಿಂದ ಮಧ್ಯಾಹ್ನ 2ಗಂಟೆ ನಂತರ ಅಂಗಡಿಗಳನ್ನು ಬಂದ್ ಮಾಡುತ್ತಿದ್ದಾರೆ.

ತಾಲೂಕಿನಲ್ಲಿ ಈಗಾಗಲೇ ಒಟ್ಟು 16 ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 13 ಟಿಬೆಟಿಯನ್ ಕಾಲನಿಯ ಹಾಸ್ಟೆಲ್ ಕ್ವಾರಂಟೈನ್​ನಲ್ಲಿ ಕಂಡು ಬಂದರೆ, ಇನ್ನೆರಡು ಪ್ರಕರಣ ಮುಂಬೈನಿಂದ ತಾಲೂಕಿನ ಬಡ್ಡಿಗೇರಿಗೆ ಬಂದ ಬಾಲಕ ಮತ್ತು ಶಿಡ್ಲಗುಂಡಿಗೆ ಬಂದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿತ್ತು. ಅಲ್ಲದೆ, ಪ್ರಯಾಣದ ಇತಿಹಾಸ ದಾಖಲೆ ಇಲ್ಲದ ಪಟ್ಟಣದ ಯುವಕನಿಗೆ ಸೋಮವಾರ ಕರೊನಾ ಪಾಸಿಟಿವ್ ಬಂದಿದ್ದು ಪಟ್ಟಣದ ಜನರಲ್ಲಿ ಆತಂಕ ಮೂಡಿಸಿದೆ. ಇದರಿಂದಾಗಿ ವರ್ತಕರೆಲ್ಲ ಸೇರಿ ಬುಧವಾರದಿಂದ ಸ್ವಯಂ-ಪ್ರೇರಿತರಾಗಿ ಮಧ್ಯಾಹ್ನ 2ರ ನಂತರ ಅಂಗಡಿಗಳನ್ನು ಬಂದ್ ಮಾಡುತ್ತಿದ್ದಾರೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಪೊಲೀಸರು ಧ್ವನಿವರ್ಧಕದ ಮೂಲಕ ರಾತ್ರಿ 8 ಗಂಟೆ ನಂತರ ಅಂಗಡಿಗಳನ್ನು ಬಂದ್ ಮಾಡಬೇಕು, ಸಾರ್ವಜನಿಕರು ಓಡಾಡಬಾರದು ಎಂದು ಮಂಗಳವಾರ ಸಂಜೆ ಪ್ರಚಾರ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net