ಮೀಸಲಾತಿಗಾಗಿ ಮತ್ತೆ ಹೋರಾಟ

08BKT01
ಬಾಗಲಕೋಟೆ ನಗರದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಿಜಯಾನಂದ ಕಾಶಪ್ಪನವರ, ಮೋಹನ ನಾಡಗೌಡ, ಅಮರೇಶ ನಾಗೂರ, ಸಂಗಮೇಶ ದೊಡ್ಡಮನಿ ಇತರರಿದ್ದರು.
Published on

ಬಾಗಲಕೋಟೆ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡುವ ಕುರಿತು ಎರಡು ವರ್ಷದಿಂದ ನಿರಂತರ ಹೋರಾಟ ನಡೆಯುತ್ತಿದ್ದು, ಆರು ಬಾರಿ ಮಾತು ಕೊಟ್ಟು ಸರ್ಕಾರ ತಪ್ಪಿದೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದ್ದು, ಜ.೧೩ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನಿವಾಸದ ಎದುರು ಮತ್ತೆ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಲಿಂಗಾಯತ ಪಂಚಮಸಾಲಿ ಸಮಾಜದಿಂದ ೨೦ ಲಕ್ಷ ಜನರನ್ನು ಸೇರಿಸಿ ಬೆಳಗಾವಿಯಲ್ಲಿ ಹೋರಾಟ ಮಾಡಲಾಗಿದೆ. ಆಗ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿ ತರಿಸಿ ಮೀಸಲಾತಿ ನೀಡುವುದಾಗಿ ಭರವಸೆ ನೀಡಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಅವರು ತಾಯಿ ಮೇಲೆ ಆಣೆ ಮಾಡಿದ್ದರು. ಡಿ.೨೯ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ಮೀಸಲಾತಿ ವಿಷಯ ಸ್ಪಷ್ಟವಾಗಿಲ್ಲ. ಸಿಎಂ ಬೊಮ್ಮಾಯಿ ಮೀಸಲಾತಿ ವಿಷಯದಲ್ಲಿ ಪ್ರಾಮಾಣಿಕವಾಗಿ ನಡೆದುಕೊಳ್ಳಲಿಲ್ಲ ಎಂದು ನವನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸಮಾಜದ ಸಮಿತಿಯು ಸಭೆ ನಡೆಸಿ ಮತ್ತೆ ಹೋರಾಟ ಮುಂದುವರಿಸುವ ಕುರಿತು ಸ್ಪಷ್ಟ ನಿರ್ಧಾರಕ್ಕೆ ಬಂದಿದೆ. ನಮಗೆ ಇಡಬ್ಲ್ಯುಸಿ, ಇನ್ನ್ಯಾವುದೇ ಕೆಟಗರಿಯಲ್ಲಿ ಮೀಸಲಾತಿ ಬೇಡ. ಇದು ಅಸಮರ್ಪಕವಾದ ನಿಲುವಾಗಿದ್ದು, ಹೋರಾಟ ಕೈಗೊಳ್ಳುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಬರಲಾಗಿದೆ. ಅದರಂತೆ ಮುಂದಿನ ಹೋರಾಟ ಕೈಗೊಳ್ಳಲಾಗಿದ್ದು, ಸಮಾಜದ ಬಡಮಕ್ಕಳ ಭವಿಷ್ಯಕ್ಕಾಗಿ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
ಮೀಸಲಾತಿ ವಿಷಯದಲ್ಲಿ ಸರ್ಕಾರ ಮೂಗಿಗೆ ತುಪ್ಪ ಸವರಿಲ್ಲ. ತಲೆ ಮೇಲೆ ಹಾಕಿದೆ. ಹೀಗಾಗಿ ನಮಗೆ ಮೀಸಲಾತಿ ಪ್ರಮಾಣ ಸರಿಯಾಗಿ ಮಾಹಿತಿ ಸಿಕ್ಕಿಲ್ಲ. ಖುದ್ದು ಕಾನೂನು ಸಚಿವ ಮಾಧುಸ್ವಾಮಿಗೂ ಕರೆ ಮಾಡಿದಾಗಲೂ ನಮಗೆ ತಿಳಿದಿಲ್ಲ. ನಿಮಗೆ ಏನು ಹೇಳೋಣ ಎಂದಿದ್ದಾರೆ. ಇದು ಗೊಂದಲಕ್ಕೆ ಕಾರಣವಾಗಿದೆ. ಚುನಾವಣೆ ನೀತಿ ಸಂಹಿತೆ ಬರುವುದರೊಳಗೆ ಸರ್ಕಾರ ಸ್ಪಷ್ಟ ಅಽಸೂಚನೆ ಹೊರಡಿಸಬೇಕು. ಇಲ್ಲವಾದಲ್ಲಿ ಸಮಾಜವು ಚುನಾವಣೆ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಸಚಿವ ಮುರುಗೇಶ ನಿರಾಣಿ, ಶಾಸಕ ಬಸನಗೌಡ ಪಾಟೀಲ ಯತ್ನಾಳರ ವಾಕ್ಸಮರ ಕುರಿತು ಪ್ರತಿಕ್ರಿಯೆ ನೀಡಿದ ಬಸವಜಯ ಮೃತ್ಯುಂಜಯ ಶ್ರೀಗಳು, ಧರ್ಮ- ಅಧರ್ಮದ ನಡುವೆ, ಸತ್ಯ-ಅಸತ್ಯದ ನಡುವೆ ಹೋರಾಟ ನಡೆಯುತ್ತಿದೆ. ನ್ಯಾಯ- ನೀತಿ ವಿರುದ್ಧವಾಗಿದ್ದವರ ಸತ್ಯ ಬಯಲಾಗುತ್ತಿದೆ. ಹೀಗಾಗಿ ದುಷ್ಟಶಕ್ತಿಯ ಮರ್ಮ ಬಹಿರಂಗವಾಗಲಿದೆ ಎಂದು ಸಚಿವ ನಿರಾಣಿಗೆ ಪರೋಕ್ಷವಾಗಿ ಚುಚ್ಚಿದರು.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ನಮ್ಮೆಲ್ಲರ ನಿರೀಕ್ಷೆ ಹುಸಿಯಾಗಿದೆ. ಆಯೋಗದ ಮಧ್ಯಂತರ ವರದಿ ತರಿಸಿದರೂ ೨ಎ ಮೀಸಲಾತಿ ನೀಡಲಿಲ್ಲ. ಹೀಗಾಗಿ ಜ.೧೩ರಂದು ಶಿಗ್ಗಾಂವಿಯಲ್ಲಿ ಮತ್ತೆ ಹೋರಾಟ ಹಮ್ಮಿಕೊಂಡಿದ್ದೇವೆ. ರಾಜ್ಯದ ಎಲ್ಲ ಭಾಗದಿಂದ ಸಮಾಜದ ಜನ ಭಾಗವಹಿಸಲಿದ್ದಾರೆ ಎಂದರು.
ಮುಖಂಡರಾದ ಮೋಹನ ನಾಡಗೌಡ, ಅಮರೇಶ ನಾಗೂರ, ಸಂಗಮೇಶ ದೊಡ್ಡಮನಿ, ಮಂಜುನಾಥ ಪುರತಗೇರಿ, ಚನ್ನವೀರ ಅಂಗಡಿ, ವಿನೋದ ಬಾದವಾಡಗಿ, ಗಿರೀಶ ಯಲಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net