

ರಾಣೆಬೆನ್ನೂರ: ತಾಲೂಕಿನಲ್ಲಿ ಮೀನು ಕೃಷಿಗೆ ಪೂರಕ ವಾತಾವರಣವಿದೆ. ಸಾಕಾಣಿಕೆ ಮಾಡುವ ರೈತರೂ ಇದ್ದಾರೆ. ಆದರೆ, ಮೀನುಗಾರಿಕೆ ಕಚೇರಿಯೇ ಇಲ್ಲ...!
ಈ ಭಾಗದಲ್ಲಿ ತುಂಗಭದ್ರಾ, ಕುಮಧ್ವತಿ ನದಿ ಹಾಗೂ ಹೆಚ್ಚು ಕೆರೆಗಳು ಇರುವುದರಿಂದಾಗಿ ಮೀನು ಕೃಷಿಗೆ ಅನುಕೂಲಕರ ವಾತಾವರವಿದೆ. ಆದರೆ, ಇಲಾಖಾ ಕಚೇರಿ ಇಲ್ಲದೇ ಇರುವುದರಿಂದ ಮೀನು ಸಾಕಣಿಕೆದಾರರಿಗೆ ಸಹಾಯಧನ ಬಿಡುಗಡೆ ಹಾಗೂ ಪ್ರೋತ್ಸಾಹ ದೊರಕುತ್ತಿಲ್ಲ. ಹೀಗಾಗಿ ಮೀನುಗಾರಿಕೆ ಕೃಷಿ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಕಾಣುತ್ತಿಲ್ಲ.
ಇಲಾಖೆಯ ತಾತ್ಕಾಲಿಕ ಕಾರ್ಯಾಲಯ ಇದ್ದೂ ಇಲ್ಲದಂತಿರುವುದರಿಂದ ಸಾಕಾಣಿದಾರರಿಗೆ ಪ್ರಯೋಜನವಾಗುತ್ತಿಲ್ಲ. ಆರಂಭದಲ್ಲಿ ಮೀನು ಕೃಷಿಗೆ ಉತ್ಸಾಹ ತೋರಿದ ರೈತರೇ ಈಗ ನೆರವಿನ ಕೊರತೆಯಿಂದ ಹಿಂದೆ ಸರಿಯುತ್ತಿದ್ದಾರೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಕೆರೆಗಳಲ್ಲಿ ಮೀನು ಸಾಕಾಣಿಕೆ ಕೈಗೊಳ್ಳುವ ಮೀನುಗಾರರಿಗೆ ಉದ್ಯಮ ಕೈಹಿಡಿಯುತ್ತಿತ್ತು. ಆದರೆ, ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವುದರಿಂದ ಮೀನು ಕೃಷಿಗೆ ಭಾರಿ ಹಿನ್ನಡೆ ಉಂಟಾಗಿದೆ.
ಮೀನು ಕೃಷಿಗೆ ಪೂರಕ: ತಾಲೂಕಿನಲ್ಲಿ ಒಟ್ಟು 15 ದೊಡ್ಡ ಹಾಗೂ 35 ಸಣ್ಣ ಕೆರೆಗಳಿವೆ. ಕಳೆದ ಬಾರಿ ಉತ್ತಮ ಮಳೆಯಾಗಿರುವುದರಿಂದ ಕೆರೆಗಳು ತುಂಬಿವೆ. ತುಂಗಭದ್ರ ಹಾಗೂ ಕುಮಧ್ವತಿ ನದಿಯಲ್ಲೂ ನೀರಿನ ಹರಿವು ಚೆನ್ನಾಗಿದೆ. ಹೀಗಾಗಿ ತಾಲೂಕಿನಲ್ಲಿ ಮೀನು ಕೃಷಿಗೆ ಪೂರಕ ವಾತಾವರಣವಿದೆ.
ಪಾಳು ಬಿದ್ದ ತಾತ್ಕಾಲಿಕ ಕಚೇರಿ: ತಾಲೂಕಿಗೊಂದು ಮೀನುಗಾರಿಕೆ ಇಲಾಖೆ ಕಚೇರಿ ಇರಬೇಕು ಎಂಬ ಸರ್ಕಾರದ ನಿಯಮವಿದೆ. ರಾಣೆಬೆನ್ನೂರಿನಲ್ಲಿ 1977ರಲ್ಲಿ ತಾತ್ಕಾಲಿಕವಾಗಿ ಮೀನುಗಾರಿಕೆ ಇಲಾಖೆಯ ಕಾರ್ಯಾಲಯ ಹಾಗೂ ಮೀನು ಮರಿ ಜೀವನೋಪಾಯ ತೊಟ್ಟಿ ನಿರ್ವಿುಸಲಾಗಿದೆ. ವಿಪರ್ಯಾಸವೆಂದರೆ ಮೀನು ಮರಿ ತೊಟ್ಟಿಯಲ್ಲಿ ಈವರೆಗೂ ಒಂದು ಮೀನೂ ಜೀವಿಸಿಲ್ಲ.
ಅಪರೂಪಕ್ಕೆ ಭೇಟಿ ನೀಡುವ ಅಧಿಕಾರಿಗಳು: ರಾಣೆಬೆನ್ನೂರ ಕಚೇರಿಯ ಜವಾಬ್ದಾರಿಯನ್ನು ಹಿರೇಕೆರೂರ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಿಗೆ ವಹಿಸಲಾಗಿದೆ. ಇವರು ಯಾವಾಗಲೋ ಒಮ್ಮೆ ಭೇಟಿ ನೀಡುತ್ತಾರೆ. ಸಿಬ್ಬಂದಿಯನ್ನೂ ನೇಮಕ ಮಾಡಿಲ್ಲ. ಕಚೇರಿಯಲ್ಲಿ ಜವಾನನ ಕೆಲಸದಿಂದ ಹಿಡಿದು ಅಧಿಕಾರಿಯ ಕೆಲಸದವರೆಗೆ ಅವರೇ ಮಾಡಿಕೊಳ್ಳಬೇಕು. ಮೀನುಗಳನ್ನು ಸಾಕಿರುವ ಕೆರೆಗಳಿಗೆ ತೆರಳಲು ವಾಹನಗಳ ವ್ಯವಸ್ಥೆ ಇಲ್ಲ. ಬೈಕ್ನಲ್ಲಿ ಹೋದರೆ ಸರ್ಕಾರದಿಂದ ಯಾವುದೇ ಖರ್ಚು ಪಡೆಯಲು ಅವಕಾಶ ಇಲ್ಲ. ಹೀಗಾಗಿ ನಿರ್ದೇಶಕರು ಅಪರೂಪಕ್ಕೊಮ್ಮೆ ತಾಲೂಕಿಗೆ ಬರುತ್ತಾರೆ.
ಸೌಕರ್ಯಗಳೇನು...? : ತಾಲೂಕಿನಲ್ಲಿ 50ಕ್ಕೂ ಅಧಿಕ ಮೀನು ಸಾಕಾಣಿಕೆದಾರರಿದ್ದಾರೆ. ಮೀನುಗಾರರು ಸಾಕಲು ತರುವ ಮೀನು ಮರಿಗಳಿಗೆ ಶೇ. 50ರಂತೆ ಮೀನುಗಾರಿಕೆ ಇಲಾಖೆಯಿಂದ ಸಬ್ಸಿಡಿ ನೀಡಬೇಕು. ಮೀನುಗಾರಿಕೆ ಸಹಕಾರ ಸಂಘದ ಸದಸ್ಯರಿಗೆ ಅಪಘಾತದಲ್ಲಿ ಅನಾಹುತವಾದರೆ ವಿಮೆ ನೀಡಬೇಕು. ಬಲೆಗಳು ಹಾಗೂ ಇತರ ಸಾಮಗ್ರಿಗಳನ್ನು ನೀಡುವ ಅವಕಾಶವಿದೆ. ಮೀನುಗಳನ್ನು ಮಾರಿಕೊಂಡು ಬರಲು ದ್ವಿಚಕ್ರ ವಾಹನ ಕೊಡಿಸಬೇಕು. ಆದರೆ, ಇಲಾಖೆಯ ನಿರ್ಲಕ್ಷ್ಯದಿಂದ ಈ ಯಾವ ಸೌಲಭ್ಯವೂ ಮೀನು ಸಾಕಾಣಿಕೆದಾರರಿಗೆ ಸಿಗುತ್ತಿಲ್ಲ.
ರಾಣೆಬೆನ್ನೂರಿನಲ್ಲಿ ಮೀನುಗಾರಿಕೆ ಕಚೇರಿ ಮಂಜೂರು ಆಗದ ಕಾರಣ ಹಿರೇಕೆರೂರಿಗೆ ರಾಣೆಬೆನ್ನೂರನ್ನು ಸೇರ್ಪಡೆ ಮಾಡಲಾಗಿದೆ. ಅಲ್ಲಿ ಯಾವುದೇ ಸಿಬ್ಬಂದಿ ಇಲ್ಲ. ಹೀಗಾಗಿ ತೊಂದರೆಯಾಗಿದೆ. ಈ ಕುರಿತು ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ಕಚೇರಿ ಮಂಜೂರು ಮಾಡಿದರೆ, ಮೀನು ಕೃಷಿಗೆ ಅನುಕೂಲವಾಗುತ್ತದೆ. ಸದ್ಯ ಹಿರೇಕೆರೂರಿನಿಂದಲೇ ಎಲ್ಲ ಸೌಲಭ್ಯ ನೀಡುವ ವ್ಯವಸ್ಥೆ ಮಾಡುತ್ತಿದ್ದೇವೆ. | ಎಸ್.ಪಿ. ದಂದೂರ, ಸಹಾಯಕ ನಿರ್ದೇಶಕ ಮೀನುಗಾರಿಕೆ ಇಲಾಖೆ ಮೀನು ಕೃಷಿ ಹೆಚ್ಚು ಲಾಭದಾಯಕವಾದದ್ದು. ಸರ್ಕಾರ ಇದಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿಲ್ಲ. ತಾಲೂಕಿನಲ್ಲಿರುವ ಕೆರೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿದರೆ, ಮೀನು ಕೃಷಿಗೆ ಅನುಕೂಲವಾಗುತ್ತದೆ. ಆದರೆ, ಇಲ್ಲಿ ಮೀನುಗಾರಿಕೆ ಇಲಾಖೆ ಕಚೇರಿಯೇ ಇಲ್ಲದ ಕಾರಣ ಯಾವ ಕೆಲಸವಾಗುತ್ತಿಲ್ಲ. ಸ್ಥಳೀಯ ಶಾಸಕರು ಈ ಕುರಿತು ಸೂಕ್ತ ಕ್ರಮ ಕೈಗೊಂಡು ಮೀನು ಕೃಷಿಕರಿಗೆ ಅನುಕೂಲ ಮಾಡಿಕೊಡಬೇಕು. | ಮಂಜುನಾಥ ಬಿ., ಮೀನು ಸಾಕಾಣಿಕೆದಾರ