

ಕಲಬುರಗಿ: ಬಾಲ್ಯದಲ್ಲಿ ಕಾಡುವ ೧೨ ಮಾರಕ ರೋಗ ತಡೆಗಟ್ಟಲು ವಯಸ್ಸಿನ ಅನುಸಾರ ಮಕ್ಕಳಿಗೆ ತಪ್ಪದೆ ಎಲ್ಲಾ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜಶೇಖರ ಮಾಲಿ ಸಲಹೆ ಮಾಡಿದರು.
ಪರಿಣಾಮಕಾರಿ ಮಿಷನ್ ಇಂದ್ರಧನುಷ್ ೫.೦ ಅಭಿಯಾನ ಮೂರನೇ ಸುತ್ತಿನ ಕಾರ್ಯಕ್ರಮ ಹಾಗೂ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜಶೇಖರ ಮಾಲಿ ನಗರದ ಹೀರಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಂಗಣದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಲಸಿಕೆ ವಂಚಿತ, ಲಸಿಕೆ ತಪ್ಪಿದ, ಬಿಟ್ಟು ಹೋದ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದ್ದು, ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬೇಕು. ತಾಯಂದಿರು ಮಕ್ಕಳಿಗೆ ಹುಟ್ಟಿನಿಂದ ಐದು ವರ್ಷದಲ್ಲಿ ಏಳು ಬಾರಿ ಲಸಿಕೆ ಹಾಕಿಸಲು ಆಸ್ಪತ್ರೆಗೆ ಬರುವುದನ್ನು ಮರೆಯಬಾರದು. ಮುಖ್ಯವಾಗಿ ೧೨ ಮಾರಕ ರೋಗಗಳ ವಿರುದ್ಧ ನೀಡುವ ಲಸಿಕೆಯನ್ನು ಮಗುವಿನ ಒಂದು ವರ್ಷದೊಳಗೆ ಹಾಕಲಾಗುವುದು ಎಂದರು.
ಕೆಲ ರೋಗಗಳಿಗೆ ಪೋಲಿಯೋ, ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ರುಬೆಲ್ಲಾ, ಮೆದುಳು ಜ್ವರ ಸೇರಿ ೧೬ರಿಂದ ೨೩ ತಿಂಗಳೊಳಗೆ ಹೆಚ್ಚುವರಿಯಾಗಿ ಬೂಸ್ಟರ್ ಡೋಸ್ ರೂಪದಲ್ಲಿ ನೀಡಲಾಗುವುದು. ೫ರಿಂದ ೬ ವರ್ಷದಲ್ಲಿ ಪುನಃ ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು ರೋಗಗಳಿಗೆ ಎರಡನೇ ಬಾರಿ ಬೂಸ್ಟರ್ ಡೋಸ್ ನೀಡಲಾಗುತ್ತದೆ ಎಂದರು.
ಡಾ.ಅನಿಲಕುಮಾರ್ ತಾಳಿಕೋಟಿ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ್ ಮಾತನಾಡಿದರು. ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ರವಿಕಾಂತಿ ಕ್ಯಾತನಾಳ್, ಹೀರಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನಿತಾ ಜಾಧವ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವೀರೇಶ ಜವಳಗೇರ, ರವೀಂದ್ರ ಠಾಕೂರ್, ಶ್ರೀಕಾಂತ್ ಸ್ವಾಮಿ. ವಿಶ್ವನಾಥ ಸಣ್ಣೂರ, ಜನಾನಂದ ಪಾಟೀಲ್, ಶಿವಕುಮಾರ್ ಕಾಂಬಳೆ, ಅಲ್ಲಮಪ್ರಭು ಇತರರಿದ್ದರು.