ಮಿಂಚಿನ ನೋಂದಣಿ ನಾಳೆಯಿಂದ

4mnd1
Published on

ಯಲ್ಲಾಪುರ: ಚುನಾವಣಾ ಆಯೋಗದ ನಿರ್ದೇಶನದಂತೆ 2020ರ ಜನವರಿ 1ಕ್ಕೆ 18 ವರ್ಷ ತುಂಬಿದ ಯುವ ಮತದಾರರು ಮತ್ತು ಈವರೆಗೂ ಮತದಾರರ ಯಾದಿಯಲ್ಲಿ ಹೆಸರು ನೋಂದಣಿಯಾಗದಿದ್ದ ಮತದಾರರ ಹೆಸರನ್ನು ಸೇರ್ಪಡೆಗೊಳಿಸುವ ಉದ್ದೇಶದಿಂದ ಜ. 6, 7 ಮತ್ತು 8ರಂದು ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಡಿ.ಜಿ. ಹೆಗಡೆ ಹೇಳಿದರು.

ಶನಿವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮತದಾರರ ಮಿಂಚಿನ ನೋಂದಣಿ ಕುರಿತು ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅರ್ಹ ಮತದಾರರು ಪೂರಕ ದಾಖಲೆಗಳೊಂದಿಗೆ ನಮೂನೆ-6 ರಲ್ಲಿ ಅರ್ಜಿಯನ್ನು ಆನ್​ಲೈನ್ ಅಥವಾ ನೇರವಾಗಿ ತಹಸೀಲ್ದಾರ ಕಾರ್ಯಾಲಯದ ಮತಗಟ್ಟೆ ಅಧಿಕಾರಿಗಳ ಮೂಲಕ ಸಲ್ಲಿಸಬಹುದಾಗಿದೆ. ಈಗಾಗಲೇ ನೋಂದಣಿ ಪ್ರಕ್ರಿಯೆಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಜ. 6ರಂದು ಶಾಲಾ ವಿದ್ಯಾರ್ಥಿಗಳ ಪ್ರಭಾತ್​ಪೇರಿ ಆಯೋಜಿಸಲಾಗಿದೆ. ಜ. 25ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು, ಪ್ರತಿ ಬೂತ್ ಮಟ್ಟದಲ್ಲಿಯೂ ಇದನ್ನು ನಡೆಸಲಾಗುವುದು ಎಂದರು.

ಪ.ಪಂ. ಮುಖ್ಯಾಧಿಕಾರಿ ಅರುಣ ನಾಯ್ಕ, ದೈಹಿಕ ಶಿಕ್ಷಣ ಪರಿವೀಕ್ಷಕ ರವೀಂದ್ರ ಕಾಪ್ಸೆ, ತಾ.ಪಂ. ವ್ಯವಸ್ಥಾಪಕ ಎಸ್.ಆರ್. ಆಚಾರಿ, ಸಿಡಿಪಿಒ ಫಾತಿಮಾ ಚುಳಕಿ, ಎಪಿಎಂಸಿ ಕಾರ್ಯದರ್ಶಿ ಕೃಷ್ಣಕಾಂತ ನಾಯ್ಕ, ಹೆಸ್ಕಾಂ ಎಇಇ ವಿಶಾಲ ಧರೆಪ್ಪಗೋಳ ಇತರರು ಭಾಗವಹಿಸಿದ್ದರು.

ಮುಂಡಗೋಡದಲ್ಲಿ ಜಾಗೃತಿ ಜಾಥಾ: ಮಿಂಚಿನ ನೋಂದಣಿ ಕಾರ್ಯಕ್ರಮದ ಅಂಗವಾಗಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಮುಂಡಗೋಡದಲ್ಲಿ ಶನಿವಾರ ಮತದಾರರ ಜಾಗೃತಿ ಜಾಥಾ ನಡೆಯಿತು. ಪಟ್ಟಣದ ಪರಿವೀಕ್ಷಣಾ ಮಂದಿರದಿಂದ ಆರಂಭವಾದ ಜಾಗೃತಿ ಜಾಥಾಕ್ಕೆ ತಹಸೀಲ್ದಾರ್ ಶ್ರೀಧರ ಮುಂದಲಮನಿ ಚಾಲನೆ ನೀಡಿದರು. ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜಾಥಾ ಸ.ಪ.ಪೂ ಕಾಲೇಜು ಆವರಣದಲ್ಲಿ ಕೊನೆಗೊಂಡಿತು. ಜಾಥಾದಲ್ಲಿ ತಾ.ಪಂ. ಇಒ ಪ್ರವೀಣ ಕಟ್ಟಿ, ಪ.ಪಂ. ಮುಖ್ಯಾಧಿಕಾರಿ ಸಂಗನಬಸಯ್ಯಾ, ಪ್ರಭಾರ ಸಿಡಿಪಿಒ ದೀಪಾ ಬಂಗೇರ, ಶಾಲಾ ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಮತದಾರರಿಗೆ ಮೂರು ದಿನಗಳ ಅವಕಾಶ: ದಾಂಡೇಲಿ: ರಾಜ್ಯ ಚುನಾವಣಾ ಆಯೋಗ ಮತ್ತು ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಜ. 6ರಿಂದ ಮೂರು ದಿನ ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಮಹಾವಿದ್ಯಾಲಯಗಳಲ್ಲಿ ಮತ್ತು ಮತಗಟ್ಟೆ ಕೇಂದ್ರಗಳಲ್ಲಿ 2020 ಜನವರಿ 1 ಕ್ಕೆ 18 ವರ್ಷ ಪೂರ್ಣಗೊಂಡ ಅರ್ಹ ಮತದಾರರು ಅವಶ್ಯ ದಾಖಲೆ ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬಹುದು. ದಾಂಡೇಲಿ ತಹಸೀಲ್ದಾರ್ ಕಾರ್ಯಾಲಯದಲ್ಲೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7022892289 ಸಂರ್ಪಸಬಹುದಾಗಿದೆ ಎಂದು ದಾಂಡೇಲಿ ತಹಸೀಲ್ದಾರ್ ಶೈಲೇಶ ಪರಮಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net