ಮಾಸ್ಕ್ ಮರೆತರೆ ದಂಡ ಬೀಳುವುದು ಖಾತ್ರಿ

12gkn1-a-
Published on

ಗೋಕರ್ಣ: ಮಾರ್ಚ್ 7ರಿಂದ ಪ್ರಾರಂಭವಾಗಲಿರುವ ಮಹಾಬಲೇಶ್ವರ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಸಂಬಂಧ ಕುಮಟಾ ವಿಭಾಗೀಯ ಅಧಿಕಾರಿ ಅಜಿತ್ ಎಂ. ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಎಸಿ ಅಜಿತ್ ಎಂ. ಸರ್ಕಾರ ಜಾತ್ರೆ ನಡೆಸಲು ಒಪ್ಪಿಗೆ ನೀಡಿದೆಯಾದರೂ ಕೋವಿಡ್ ನಿಯಮ ಜಾರಿಯಲ್ಲಿರುವುದರಿಂದ ಅದನ್ನು ತಪ್ಪದೆ ಪರಿಪಾಲಿಸುವ ಅಗತ್ಯವಿದೆ ಎಂದರು.

ಗೋಕರ್ಣಕ್ಕೆ ಹೊರ ರಾಜ್ಯಗಳಿಂದ ಕೂಡ ಯಾತ್ರಿಕರು ಈ ವೇಳೆ ಆಗಮಿಸಲು ಸಭೆ ಸಹಮತ ವ್ಯಕ್ತ ಪಡಿಸಿದೆ.

ಜಾತ್ರೆಗೆ ಆಗಮಿಸುವವರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಇದಕ್ಕೆ ತಪ್ಪಿದಲ್ಲಿ ಕಾನೂನಿನಂತೆ ದಂಡ ಹಾಕಲಾಗುತ್ತದೆ. ಇದಕ್ಕಾಗಿ ಬೇರೆ ಬೇರೆ ಮುಖ್ಯ ಸ್ಥಳಗಳಲ್ಲಿ ಕಾರ್ಯನಿರ್ವಹಿಸಲು ನಾಲ್ಕು ತಂಡಗಳನ್ನು ರಚಿಸಲಾಗುವುದು ಎಂದರು.

ಊರ ಪ್ರವೇಶ ದ್ವಾರದಲ್ಲಿ ಮತ್ತು ಮಹಾಬಲೇಶ್ವರ ಮಂದಿರದಲ್ಲಿ ಕಡ್ಡಾಯವಾಗಿ ಯಾತ್ರಿಕರನ್ನು ಸ್ಕ್ರೀನಿಂಗ್ ಮಾಡಿ ಒಳಕ್ಕೆ ಬಿಡಲಾಗುತ್ತದೆ ಎಂದರು.

ತಹಸೀಲ್ದಾರ ಮೇಘರಾಜ ನಾಯ್ಕ, ಗ್ರಾಪಂ ಅಧ್ಯಕ್ಷ ಮಂಜುನಾಥ ಜನ್ನು, ಉಪಾಧ್ಯಕ್ಷೆ ಶಾರದಾ ಮೂಡಂಗಿ, ತಾಪಂ ಸದಸ್ಯ ಮಹೇಶ ಶೆಟ್ಟಿ, ತಾಪಂ ಇಒ ಸಿ.ಟಿ.ನಾಯ್ಕ, ಇಂಜಿನಿಯರಿಂಗ್ ವಿಭಾಗದ ಆರ್.ಜಿ.ಗುನಗಿ, ಪಿಎಸ್​ಐ ನವೀನ ನಾಯ್ಕ, ಟಿಎಚ್​ಒ ಡಾ.ಆಜ್ಞಾ ನಾಯಕ, ಆರೋಗ್ಯಾಧಿಕಾರಿ ಡಾ.ಜಗದೀಶ ನಾಯ್ಕ, ಮಹಾಬಲೇಶ್ವರ ಮಂದಿರದ ಆಡಳಿತಾಧಿಕಾರಿ ಜಿ.ಕೆ.ಹೆಗಡೆ ಮುಂತಾದವರಿದ್ದರು. ಪಿಡಿಒ ವಿನಯಕುಮಾರ, ಕಾರ್ಯದರ್ಶಿ ವಿನಾಯಕ ಸಿದ್ದಾಪುರ ನಿರ್ವಹಿಸಿದರು.

ಅಂಗಡಿಗಳಿಗೆ ಅವಕಾಶ: ಜಾತ್ರೆ ಸಮಯದಲ್ಲಿ ರಸ್ತೆ ಬದಿಯಲ್ಲಿ ಸಂಚಾರಕ್ಕೆ ತೊಂದರೆ ಆಗದಂತೆ ತಾತ್ಕಾಲಿಕ ಅಂಗಡಿ ಹಾಕಲು ಒಪ್ಪಿಗೆ ನೀಡಲಾಯಿತು. ಕೆಲವು ಇಕ್ಕಟ್ಟಿನ ರಸ್ತೆಗಳಲ್ಲಿ ಒಂದು ಬದಿಯಲ್ಲಿ ಮಾತ್ರ ಅಂಗಡಿಗೆ ಅವಕಾಶ ನೀಡಲಾಯಿತು.

ಟ್ಯಾಟೂ ಬಂದ್: ಸಾಂಕ್ರಾಮಿಕ ರೋಗ ಹರಡುವ ಅಪಾಯದ ಹಿನ್ನೆಲೆಯಲ್ಲಿ ಇಲ್ಲಿನ ಬೀಚ್​ಗಳು ಸೇರಿದಂತೆ ಎಲ್ಲ ಕಡೆಗಳಲ್ಲಿನ ಟ್ಯಾಟೂ (ಹಚ್ಚೆ) ಅಂಗಡಿಗಳನ್ನು ಬಂದ್ ಮಾಡಲು ಸಭೆ ನಿರ್ಧರಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net