ಮಾಸಿಕ 12 ಸಾವಿರ ರೂ. ವೇತನ ನೀಡಿ

29 hkr 04
Published on

ಹಿರೇಕೆರೂರ: ಮಾಸಿಕ 12 ಸಾವಿರ ರೂ. ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಆಶಾ ಕಾರ್ಯಕರ್ತೆಯರು ತಹಸೀಲ್ದಾರ್ ಕಚೇರಿಯಲ್ಲಿ ಶಿರಸ್ತೆದಾರ್ ಎಚ್.ಬಿ. ಹತ್ತಿಮತ್ತೂರ ಮೂಲಕ ರಾಜ್ಯ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿದರು.

ಈ ವೇಳೆ ತಾಲೂಕು ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಗೀತಾ ಮಡಿವಾಳರ ಮಾತನಾಡಿ, ಈ ಹಿಂದೆ ರಾಜ್ಯವ್ಯಾಪಿ ಜನವರಿ ಹಾಗೂ ಜೂನ್​ನಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಸರ್ಕಾರದಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಾವು ನಮ್ಮ ಜೀವ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದೇವೆ. ಸರ್ಕಾರ ಕೂಡಲೇ ಮಾಸಿಕ ಗೌರವ ಧನ ಹಾಗೂ ಪ್ರೋತ್ಸಾಹಧನ ಎರಡನ್ನೂ ಸೇರಿಸಿ 12 ಸಾವಿರ ರೂ. ವೇತನವನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೂ ಮುನ್ನ ತಾಲೂಕು ಆಶಾ ಕಾರ್ಯಕರ್ತೆಯರ ಸಂಘದಿಂದ ಪಟ್ಟಣದ ಬಯಲು ಶ್ರೀ ಬಸವೇಶ್ವರ ದೇವಸ್ಥಾನದಿಂದ ಸರ್ವಜ್ಞ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.

ಆಶಾ ಕಾರ್ಯಕರ್ತೆಯರ ಸಂಘದ ಉಪಾಧ್ಯಕ್ಷೆ ಮಮತಾ ಎಸ್., ವನಜಾಕ್ಷಿ ಎ., ಶಾಂತಲಾ ಯು., ಕುಸುಮಾ ಸಿ., ರತ್ನ ಕೆ., ಶೀವಲೀಲಾ ನರಸಾಪುರ, ರೇಣುಕಾ ಚಕ್ರಸಾಲಿ, ವಿಜಯಾ ಬೆಳ್ಳೂಡಿ, ದೀಪಾ ಚಕ್ರಸಾಲಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net