

ಶಿರಸಿ: ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ರೂಪಾಯಿ ಗೌರವಧನ ನಿಗದಿ ಮಾಡಬೇಕು. ಕೋವಿಡ್- 19 ವಿರುದ್ಧದ ಹೋರಾಟಕ್ಕೆ ಅಗತ್ಯ ರಕ್ಷಣಾ ಸಾಮಗ್ರಿಗಳನ್ನು ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಕರೆ ನೀಡಿರುವ ಅನಿರ್ದಿಷ್ಟಾವಧಿ ಹೋರಾಟಕ್ಕೆ ಶಿರಸಿ ಘಟಕದ ಪದಾಧಿಕಾರಿಗಳು ಬೆಂಬಲ ಸೂಚಿಸಿದ್ದಾರೆ.
ತಾಲೂಕು ವೈದ್ಯಾಧಿಕಾರಿ ಕಚೇರಿಗೆ ಶುಕ್ರವಾರ ಆಗಮಿಸಿದ ಆಶಾ ಕಾರ್ಯಕರ್ತೆಯರು, ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ವೈದ್ಯ ಸತೀಶ ಭಟ್ಕಳ ಅವರಿಗೆ ಮನವಿ ಸಲ್ಲಿಸಿದರು.
ಆಶಾ ಕಾರ್ಯಕರ್ತೆಯರು ಮಾತನಾಡಿ, ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯವ್ಯಾಪಿ ಜೂ. 30ರಂದು ವಿವಿಧೆಡೆ ಮನವಿ ನೀಡಿದ್ದೇವೆ. ಆದರೆ, ಸರ್ಕಾರ ಈ ಬಗ್ಗೆ ಸ್ಪಂದಿಸಿಲ್ಲ. ಹೀಗಾಗಿ ಅನಿರ್ದಿಷ್ಟ ಅವಧಿವರೆಗೆ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಹೋರಾಟ ನಡೆಸಲು ಮುಂದಾಗಿದ್ದೇವೆ ಎಂದರು. ಈ ವೇಳೆ ಸಂಘದ ಅಧ್ಯಕ್ಷೆ ಸುಷ್ಮಾ ಮಡಿವಾಳ, ಸುಮಿತ್ರಾ, ಅನಿತಾ, ಜಾನಕಿ, ಚಾಂದಬಿ ಇತರರಿದ್ದರು.
ಜೊಯಿಡಾದಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಮಾಸಿಕ ಗೌರವಧನ 12 ಸಾವಿರ ರೂ., ಅಗತ್ಯ ಆರೋಗ್ಯ ರಕ್ಷಕ ಸಾಮಗ್ರಿ ನೀಡಬೇಕು ಎಂದು ಒತ್ತಾಯಿಸಿ ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಡಿ.ಎಸ್. ರಾಯ್ಕರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಕವಿತಾ ಎಸ್. ಗಾವಡಾ, ಕಾರ್ಮಲಿನ್ ರಾಜ್, ಸಂಧ್ಯಾ ವಾಳ್ಕೆ ಇತರರು ಇದ್ದರು.