ಬೈಲುಕುಪ್ಪೆ: ಮಾವನ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ಸೊಸೆ ಸೇರಿ ಇಬ್ಬರನ್ನು ಶನಿವಾರ ಬೈಲುಕುಪ್ಪೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಹೊಸೂರು ಚಂದು ಪಾಷ ಅವರ ಪತ್ನಿ ತಬರತ್ ಶಾಯಿನ ಹಾಗೂ ಚಿನ್ನ ಕರಗಿಸಿದ ಇರ್ಷಾದ್ ಪೊಲೀಸರಿಗೆ ಸಿಕ್ಕಿಬಿದ್ದಿರುವ ಆರೋಪಿಗಳು. ಆರು ತಿಂಗಳ ಹಿಂದೆ ಮಾವ ಬಾಬ್ಜಾನ್ ಪಾಷ ಅವರ ಮನೆಯಲ್ಲಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳ್ಳತನವಾಗಿತ್ತು.
ಈ ಸಂಬಂಧ ಅಂದು ಬಾಬ್ಜಾನ್ ಪಾಷ ಅವರ ಮಗ ಅಸ್ಲಾಂ ಪಾಷ ಅವರ ಪತ್ನಿ ಸಲ್ಮಾನ್‌ಬಾನು ಬೈಲುಕುಪ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಾಗಿ ಶೋಧ ಕೈಗೊಂಡಿದ್ದರು.
ಸೊಸೆ ತಬರತ್ ಶಾಯಿನ ಮೇಲೆ ಅನುಮಾನ ವ್ಯಕ್ತಪಡಿಸಿ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಕದ್ದ ಚಿನ್ನಾಭರಣವನ್ನು ಅದೇ ಗ್ರಾಮದ ಇರ್ಷಾದ್ ಎಂಬಾತನಿಗೆ ಕರಗಿಸಲು ಕೊಟ್ಟಿರುವುದಾಗಿ ತಿಳಿಸಿದ್ದಾಳೆ.
ಚಿನ್ನ ಕರಗಿಸಿ ಕೃತ್ಯಕ್ಕೆ ಸಹಕಾರ ನೀಡಿದ ಆರೋಪಿ ಇರ್ಷಾದ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರಲ್ಲದೆ, ಸುಮಾರು 45 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.