ಮಾಲ್ದಾರೆ ಗ್ರಾಪಂ ಮುಂದೆ ಬಿಎಸ್ಪಿ ಪ್ರತಿಭಟನೆ

oplus_0
oplus_0
Published on

ಸಿದ್ದಾಪುರ: ವೀರಾಜಪೇಟೆ ತಾಲೂಕಿನ, ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೊಟ್ಟೆಪಾಳಿ (ಕಲ್ಲಳ್ಳ) ಜಾಗದಲ್ಲಿ ಕಸ ವಿಲೇವಾರಿ ಕೇಂದ್ರ ನಿರ್ಮಿಸಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಬಹುಜನ ಸಮಾಜ ಪಕ್ಷದ ನೇತೃತ್ವದಲ್ಲಿ ಮಾಲ್ದಾರೆ ಗ್ರಾ.ಪಂ. ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಪಕ್ಷದ ಜಿಲ್ಲಾಧ್ಯಕ್ಷ ದಿವಿಲ್ ಕುಮಾರ್ ಮಾತನಾಡಿ, ಕಸ ವಿಲೇವಾರಿಗೆ ಗುರುತಿಸಿರುವ ಜಗದ ಸುತ್ತಮುತ್ತಲಿನಲ್ಲಿ ದಲಿತರು, ಬುಡಕಟ್ಟು ಸಮುದಾಯದವರು ಸೇರಿದಂತೆ ಹಲವು ಕುಟುಂಬಗಳು ವಾಸವಾಗಿದ್ದು, ಜನ ವಸತಿ ಪ್ರದೇಶವಾಗಿದೆ. ಸಮೀಪದಲ್ಲಿ ಅರಣ್ಯ ಪ್ರದೇಶವಿದ್ದು, ಮಳೆ ಬಂದಾಗ ನೀರು ತೋಡಿನ ಮೂಲಕ ಹರಿದು ಲಕ್ಷ್ಮಣ ತೀರ್ಥ ನದಿ ಸೇರುತ್ತದೆ. ಹೀಗಾಗಿ ಈ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಮಾಡಿದ್ದಲ್ಲಿ ನೀರು ಮಲಿನಗೊಂಡು ನದಿ ಒಡಲು ಸೇರಲಿದೆ.

ಜಾನುವಾರಗಳು ಹಾಗೂ ಪಕ್ಷಿಗಳು ತೋಡು ನೀರನ್ನೆ ಅವಲಂಬಿಸಿರುವುದರಿಂದ ಅವುಗಳ ಜೀವಕ್ಕೂ ಸಂಚಾರ ಎದುರಾಗಲಿದೆ. ಇಲ್ಲೇನಾದರೂ ಕಸ ವಿಲೇವಾರಿ ಕೇಂದ್ರ ಸ್ಥಾಪನೆಯಾದರೆ ಎಲ್ಲರಿಗೊ ಸಂಕಷ್ಟ ತಪ್ಪಿದ್ದಲ್ಲ. ಇಲ್ಲಿ ವಾಸಿಸುವ ನಾಗರಿಕರ ಆರೋಗ್ಯಕ್ಕೆ ಹಾನಿಕಾರಕವಾಗುವುದರ ಜತೆಗೆ ಉಸಿರಾಟಕ್ಕೂ ತೊಂದರೆಯಾಗಲಿದ್ದು, ಜೀವಹಾನಿಯಾಗುವ ಸಂಭವವಿದೆ. ಇದಕ್ಕೆ ಸರ್ಕಾರವೇ ಹಾಗೂ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ. ತ್ಯಾಜ್ಯ ವಿಲೇವಾರಿ ಘಟಕವನ್ನು ಕೈ ಬಿಟ್ಟು ಆಟದ ಮೈದಾನ ಮಾಡಲಿ ಎಂದು ಹೇಳಿದ ಅವರು, ಘಟಕ ಪ್ರಾರಂಭಿಸಲು ಮುಂದಾದಲ್ಲಿ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪಕ್ಷದ ಪ್ರಮುಖರಾದ ಉಮೇಶ್ ಉತ್ತಯ್ಯ, ಸರತಂಗಮ್ಮ, ಡ್ಯಾನಿಸ್, ಕೃಷ್ಣ, ಆನಂದ್, ಕುಮಾರ್, ಅನೀಸ್, ನಿತ್ಯ, ಮೂರ್ತಿ, ಚೇತನ್ ಕುಮಾರ್, ಕಾಫಿ ಬೆಳಗಾರರಾದ ಮಿಟ್ಟು ನಂಜಪ್ಪ, ಬೋಪಣ್ಣ , ಜಯ, ವಿಷ್ಣು ಕಿರಣ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸ್ಥಳೀಯ ನಿವಾಸಿಗಳುರಿದ್ದರು.

ಸ್ಥಳಕ್ಕೆ ಆಗಮಿಸಿದ ವಿರಾಜಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ ಹಾಗೂ ತಹಸೀಲ್ದಾರ್ ಅನಂತ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net