ಮಾರ್ಕ್ಸ್ ಮಾತ್ರವಲ್ಲ ರಿಮಾರ್ಕ್ ಬರದಂತಹ ವ್ಯಕ್ತಿತ್ವ ಬೆಳೆಸಿಕೊಳ್ಳಿ

16sdp2
Published on

ಸಿದ್ದಾಪುರ: ವಿದ್ಯಾರ್ಥಿಗಳಿಗೆ ಪುಸ್ತಕ ಜ್ಞಾನ, ರ್ಯಾಂಕ್ ಮುಖ್ಯವಲ್ಲ. ಲೌಕಿಕ ಪ್ರಜ್ಞೆಯೂ ಅಷ್ಟೇ ಮುಖ್ಯ. ವಿದ್ಯಾರ್ಥಿಗಳು ತಮ್ಮ ಮಾರ್ಕ್ಸ್​ಗಳನ್ನಷ್ಟೇ ಗಮನಿಸದೇ ನಡತೆಯಲ್ಲಿ ರಿಮಾರ್ಕ್ ಬರದಂತಹ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ನಮ್ಮ ದೌರ್ಬಲ್ಯ ಮೆಟ್ಟಿನಿಂತರೆ ಸಾಧನೆ ಮಾಡಲು ಸಾಧ್ಯ ಎಂದು ಪ್ರಶಾಂತಿ ಟ್ರಸ್ಟ್​ನ ಅಧ್ಯಕ್ಷ ಆರ್.ಜಿ. ಪೈ ಮಂಜೈನ್ ಹೇಳಿದರು.

ಸಂಸ್ಥೆಯ ಸಾಯಿಕಿರಣ ಸಭಾಂಗಣದಲ್ಲಿ ಎಸ್​ಎಸ್​ಎಲ್​ಸಿಯಲ್ಲಿ ರಾಜ್ಯ, ತಾಲೂಕು ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಶನಿವಾರ ಮಾತನಾಡಿದರು.

ಪ್ರಶಾಂತಿ ಸಂಸ್ಥೆಗೆ 25 ಸಾವಿರ ರೂ. ಸಹಾಯಧನ ನೀಡಿದ ಎಂಜಿಸಿ ಮಹಾವಿದ್ಯಾಲಯದ ಪ್ರಾಚಾರ್ಯು ಪ್ರೊ.ಜಯಂತಿ ಶಾನಭಾಗ ಮಾತನಾಡಿ, ಹೆಚ್ಚಿನ ಅಂಕ ಪಡೆದುಕೊಂಡಿದ್ದೇವೆ ಎನ್ನುವ ಅಮಲನ್ನು ತಲೆಗೆ ಏರಿಸಿಕೊಳ್ಳಬಾರದು. ಭವಿಷ್ಯ ರೂಪಿಸಿಕೊಳ್ಳಲು ಸಾಕಷ್ಟು ಶ್ರಮ ಅಗತ್ಯ ಎಂದು ಹೇಳಿದರು.

ಇದೇ ವೇಳೆಯಲ್ಲಿ ಬಿಎಎಂಎಸ್​ನಲ್ಲಿ ರಾಜೀವ ಗಾಂಧಿ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಪಡೆದ ಶಾಲೆಯ ಪೂರ್ವ ವಿದ್ಯಾರ್ಥಿ ಡಾ. ಪೃಥ್ವಿ ಭಟ್ಟ ಹಾಗೂ ಡಾ.ಶಂಕರಪ್ರಸಾದ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಡಾ. ಪೃಥ್ವಿ ಭಟ್ಟ, ಪ್ರತಿಭಾ ಪುರಸ್ಕಾರ ಪಡೆದ ಅನಿರುದ್ಧ ಗುತ್ತೀಕರ, ಇಂಚರಾ, ಧನ್ಯಾ ಹಾಗೂ ದಿವ್ಯಾ ಅನಿಸಿಕೆ ವ್ಯಕ್ತಪಡಿಸಿದರು. ಟ್ರಸ್ಟಿನ ಶುಭಾ ಪೈ, ಅಚ್ಯುತ ಶಾನಭಾಗ, ಎಂ.ಜಿ.ಭಟ್ಟ ಇತರರಿದ್ದರು.

ಶ್ರೇಯಾ, ಪ್ರೌಢಶಾಲಾ ಮುಖ್ಯಾಧ್ಯಾಪಕ ದಿನೇಶ ಶೆಟ್ಟಿ, ಶಿಕ್ಷಕ ಡಾ.ಪ್ರದೀಪ ಜೋಶಿ ಶಿವಳಮನೆ, ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕ ರಾಘವೇಂದ್ರ ಬೇಡ್ಕಣಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net