

ಶಿರಸಿ: ಪ್ರಸಕ್ತ ಸಾಲಿನ ಮಾರಿಕಾಂಬಾ ಜಾತ್ರೆಯು ಶನಿವಾರದಂದು ಜನಸಾಗರಕ್ಕೆ ಸಾಕ್ಷಿಯಾಯಿತು. ಸಂಜೆವರೆಗೆ 1 ಲಕ್ಷಕ್ಕೂ ಹೆಚ್ಚಿನ ಭಕ್ತರು ದೇವಿಯ ದರ್ಶನ ಪಡೆದರು.
ಪ್ರತಿವರ್ಷದ ಜಾತ್ರೆಯಂತೆ ಈ ಬಾರಿಯೂ ಲಕ್ಷಾಂತರ ಭಕ್ತರು ಮಾರಿಕಾಂಬೆ ದರ್ಶನ ಪಡೆದರು. ತುಲಾಭಾರ, ಉಡಿ ಸಮರ್ಪಣೆ, ಕೋಳಿ, ಕುರಿ ಸಮರ್ಪಣೆ, ದೀಡ್ (ದೀರ್ಘ ದಂಡ ನಮಸ್ಕಾರ) ನಮಸ್ಕಾರ, ಲಕ್ಕಿ ಸೊಪ್ಪಿನ ಸೇವೆ ಸೇರಿ ವಿವಿಧ ಹರಕೆಗಳನ್ನು ಅರ್ಪಿಸಿದರು. ಬೆಂಗಳೂರು, ಶಿವಮೊಗ್ಗ, ಮಂಗಳೂರು, ಹುಬ್ಬಳ್ಳಿ, ದಾವಣಗೆರೆ, ಹಾವೇರಿ, ಗೋವಾ, ಮಹಾರಾಷ್ಟ್ರ ಸೇರಿ ಮೂಲೆಮೂಲೆಯಿಂದ ಆಗಮಿಸಿದ್ದ ಭಕ್ತರು ಇಷ್ಟಾರ್ಥ ಪೂರೈಸುವಂತೆ ಪ್ರಾರ್ಥಿಸಿ ದೇವಿಗೆ ಪೂಜೆ ಸಲ್ಲಿಸಿದರು.
ಸಂಸದ ಅನಂತಕುಮಾರ ಹೆಗಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೊಟ್ನೇಕರ್, ಮಾಜಿ ಶಾಸಕರಾದ ಸತೀಶ ಸೈಲ್, ಮಂಕಾಳು ವೈದ್ಯ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿ ಹಲವು ಗಣ್ಯರು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಸೀರೆಗಳ ಸವಾಲು ಜೋರು: ದೇವಿಗೆ ಬರುವ ಸೀರೆ, ಖಣ, ಹಾರ ಸೇರಿ ಇತರ ವಸ್ತುಗಳನ್ನು ಜಾತ್ರಾ ಚಪ್ಪರದೆದುರು ಸವಾಲು ಕರೆದು ಭಕ್ತರಿಗೆ ನೀಡಲಾಗುತ್ತಿದೆ. ಸೀರೆಗೆ ಕನಿಷ್ಠ 100 ರೂ. ದರ ನಿಗದಿ ಮಾಡಿ ಸವಾಲು ಕರೆಯಲಾಗುತ್ತಿದ್ದು, ದೇವಿಯ ಪ್ರಸಾದ ರೂಪವಾದ ಸವಾಲನ್ನು ಪಡೆಯಲು ಭಕ್ತರು ಮುಗಿಬೀಳುತ್ತಿದ್ದಾರೆ. ಬೆಳಗಿನಿಂದ ಸಂಜೆಯವರೆಗೂ ನಿರಂತರವಾಗಿ ಸವಾಲು ನಡೆಯುತ್ತಿದ್ದು, ನಿತ್ಯ ಸಾವಿರಕ್ಕೂ ಮಿಕ್ಕಿ ಸೀರೆಗಳು ಇಲ್ಲಿ ಭಕ್ತರ ಕೈಸೇರುತ್ತಿವೆ.
ನಷ್ಟದಲ್ಲಿ ಅಮ್ಯೂಸ್ಮೆಂಟ್: ದೇವಿ ದರ್ಶನಕ್ಕೆ ಸಾಕಷ್ಟು ಜನರು ಆಗಮಿಸಿದರೂ ಮನರಂಜನೆ ಆಟಗಳತ್ತ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಜಾಯಿಂಟ್ ವೀಲ್, ಟೊರಟೊರ, ಕೋಲಂಬಸ್, ಟ್ರೖೆನ್ ಮತ್ತಿತರ ಆಟಗಳು 3 ದಿನಗಳು ನಷ್ಟದಲ್ಲಿಯೇ ಸಾಗಿದ್ದವು. ಶನಿವಾರ ಸಂಜೆ ಅಲ್ಪ ಪ್ರಮಾಣದಲ್ಲಿ ಜನರು ಇವುಗಳತ್ತ ತೆರಳುತ್ತಿದ್ದು, ಭಾನುವಾರ ಹೆಚ್ಚಿನ ಜನರು ಸೇರುವ ಸಾಧ್ಯತೆ ಇದೆ.
ನಾಟಕಕ್ಕೆ ಜನ: ಈ ಬಾರಿ ಜಾತ್ರೆಗೆ 5 ನಾಟಕ ಕಂಪನಿಗಳು ಆಗಮಿಸಿವೆ. ಸಾಮಾಜಿಕ, ಹಾಸ್ಯ ನಾಟಕಗಳನ್ನು ಪ್ರದರ್ಶಿಸುತ್ತಿವೆ. ಜೇವರ್ಗಿ, ಕಲ್ಲೂರು, ಕೆಬಿಆರ್, ಕಮತಗಿ ಹಾಗೂ ಹುಚ್ಚೇಶ್ವರ ಕಂಪನಿಗಳ ನಾಟಕಗಳು ಜನರನ್ನು ಆಕರ್ಷಿಸುತ್ತಿವೆ. ಉಳಿದಂತೆ ಸಾಲಿಗ್ರಾಮ ಮೇಳದ ಯಕ್ಷಗಾನ ಜನಮೆಚ್ಚುಗೆ ಗಳಿಸಿದೆ.
ಟ್ರಾಫಿಕ್ ಜಾಮ್: ಏಕಾಏಕಿ ಜನಜಂಗುಳಿ ಉಂಟಾದ ಕಾರಣ ವಾಹನ ದಟ್ಟಣೆ ನಿಯಂತ್ರಿಸುವಲ್ಲಿ ಪೊಲೀಸರು ಹೈರಾಣಾದರು. ಐದು ಸರ್ಕಲ್, ಕೋಟೆಕೆರೆ, ದೇವಿಕೆರೆ, ಸಿಪಿ ಬಜಾರ್ ಸೇರಿ ವಿವಿಧೆಡೆ ವಾಹನ ದಟ್ಟಣೆಯಿಂದ ವಾಹನ ಸವಾರರು ಸಂಚಾರಕ್ಕೆ ಪರದಾಡಿದರು. ಬಾರಕೂರ ಚೌಕದಲ್ಲಿ ಇಕ್ಕಟ್ಟಿನ ರಸ್ತೆಯಿರುವ ಕಾರಣ ಸಮಸ್ಯೆ ಉಲ್ಬಣಿಸುವಂತಾಗಿತ್ತು.
ಕರೊನಾ ಭೀತಿ: ವಿವಿಧೆಡೆಯ ಲಕ್ಷಾಂತರ ಭಕ್ತರು ಸೇರುವ ಜಾತ್ರೆಯಲ್ಲಿ ಮಾರಕ ರೋಗ ಕರೊನಾ ಕರಿನೆರಳು ಆವರಿಸಿದಂತೆ ಕಂಡುಬಂತು. ಮುನ್ನೆಚ್ಚರಿಕೆ ಕ್ರಮವಾಗಿ ಬಹುತೇಕ ಭಕ್ತರು ಮಾಸ್ಕ್ ಧರಿಸಿ ಜಾತ್ರೆಯ ಅಂದ ಸವಿದರು. ಇನ್ನು ಭಕ್ತರ ಈ ಆತಂಕವನ್ನೇ ಬಂಡವಾಳ ಮಾಡಿಕೊಂಡ ಕೆಲವು ವ್ಯಾಪಾರಿಗಳು ಮಾಸ್ಕ್ ವ್ಯಾಪಾರ ಮಾಡಿ ಹಣ ಗಳಿಸಿದರು. 5 ರೂ. ಮಾಸ್ಕ್ ಒಂದಕ್ಕೆ ದುಪ್ಪಟ್ಟು ದರ ಹೇಳಿ ಮಾರಾಟ ಮಾಡಿದರೂ ಭಕ್ತರು ಮಾತ್ರ ಅದನ್ನು ಖರೀದಿಸಿ ಸುರಕ್ಷತಾ ಕ್ರಮ ಅನುಸರಿಸಿದರು.