ಮಾನಸಿಕ ಆರೋಗ್ಯದ ಕಡೆಗೆ ಗಮನವಿರಲಿ

ಮಾನಸಿಕ ಆರೋಗ್ಯದ ಕಡೆಗೆ ಗಮನವಿರಲಿ
Published on

ಹಾಸನ: ದೈಹಿಕ ಆರೋಗ್ಯದಷ್ಟೆ ಮಾನಸಿಕ ಆರೋಗ್ಯವು ಬಹಳ ಮುಖ್ಯವಾಗಿದ್ದು, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ಗಮನವಹಿಸಬೇಕು ಎಂದು 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಮಾನಸಿಕ ಆರೋಗ್ಯ ವಿಮರ್ಶನಾ ಮಂಡಳಿಯ ಅಧ್ಯಕ್ಷ ಬಿ.ಎಂ. ಶೈಲಾ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಾಸನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಹಾಸನ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ಹಾಗೂ ಜಿಲ್ಲಾ ಕಾನೂನುಗಳ ಸೇವಾ ಪ್ರಾಧಿಕಾರ, ಹಾಸನ, ಮನೋವೈದ್ಯಕೀಯ ವಿಭಾಗ, ಹಿಮ್ಸ್, ಹಾಸನ ಜಿಲ್ಲಾ ಮಾನಸಿಕ ಆರೋಗ್ಯ ವಿಮರ್ಶನಾ ಮಂಡಳಿ ಆಶ್ರಯದಲ್ಲಿ ಶುಕ್ರವಾರ ಹಾಸನದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಮಾತನಾಡಿದರು.

ದೇಹದ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ದಿನನಿತ್ಯ ಯೋಗ, ಪ್ರಾಣಾಯಾಮ, ಧ್ಯಾನವನ್ನು ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಮಾತನಾಡಿ, ಮಾನಸಿಕ ಅಸ್ವಸ್ಥರಿಗೆ ಆರೈಕೆದಾರರು ಯಾರೂ ಇಲ್ಲದಂತಹ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಾಮನಿರ್ದೇಶಿತ ಆರೈಕೆದಾರರು ಅಸ್ವಸ್ಥರನ್ನು ಆರೈಕೆ ಮಾಡಬೇಕಾಗಿರುತ್ತದೆ ಎಂದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ನಾಗೇಶ್ ಪಿ. ಆರಾಧ್ಯ ಮಾತನಾಡಿ, ಮಾನಸಿಕ ಕಾಯಿಲೆಗಳು ಯಾರಿಗೆ ಬೇಕಾದರು ಬರಬಹುದು, ಬಂದಂತಹ ಸಂದರ್ಭದಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಬೇಕು ಅಥವಾ ಉಚಿತ ಮಾನಸಿಕ ಆರೋಗ್ಯ ಸಹಾಯವಾಣಿ ಟೆಲಿಮನಸ್ 14416ಕ್ಕೆ ಕರೆಮಾಡಿ ಮಾತನಾಡಬಹುದು ಎಂದು ಹೇಳಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಿ.ಎಸ್.ನಾಗಪ್ಪ ಮಾತನಾಡಿ, ನೈಸರ್ಗಿಕ ವಿಕೋಪಗಳು ಹಾಗೂ ತುರ್ತು ಪರಿಸ್ಥಿತಿಗಳ ಸಂದರ್ಭಗಳಲ್ಲಿ ತೊಂದರೆಗೊಳಗಾದವರಿಗೆ ಮಾನಸಿಕ ಬೆಂಬಲ ಅತ್ಯವಶ್ಯಕವಾಗಿರುತ್ತದೆ ಎಂದು ಹೇಳಿದರು.

ಹಿಮ್ಸ್‌ನ ಪ್ರಾಂಶುಪಾಲ ಡಾ. ಬಿ.ಸಿ.ರವಿಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇದರಲ್ಲಿ ಕೇವಲ ಶೇ.30 ಜನರು ಚಿಕಿತ್ಸೆ ಪಡೆಯುತ್ತಿದ್ದು ಉಳಿದವರು ಇದನ್ನು ಕಡೆಗಣಿಸುತ್ತಿದ್ದಾರೆ. ಹಾಗಾಗಿ ಜನರಿಗೆ ಇದರ ಬಗ್ಗೆ ಸಾಕಷ್ಟು ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದರು.

ಹಾಸನ ಮನೋವೈದ್ಯಕೀಯ ವಿಭಾಗದ ಮನೋರೋಗ ತಜ್ಞ ಡಾ.ಸಂತೋಷ್ ಮಾತನಾಡಿ, ಜನರು ಕೇವಲ ದೈಹಿಕ ಕಾಯಿಲೆಗಳ ಬಗ್ಗೆ ಗಮನ ನೀಡುತ್ತಾರೆ. ಆದರೆ ಮನಸ್ಸಿಗೆ ಸಂಬಂಧಿಸಿದ ಖಿನ್ನತೆ, ಆತಂಕ, ಗೀಳು ಕಾಯಿಲೆಗಳು ಇವುಗಳ ಬಗ್ಗೆ ಗಮನ ನೀಡುವುದಿಲ್ಲ. ತದನಂತರದಲ್ಲಿ ಇದು ಉಲ್ಬಣಗೊಂಡು ತೀವ್ರ ತರಹದ ಮಾನಸಿಕ ಕಾಯಿಲೆಗಳಾದ ಸ್ಕೀಜೋಫ್ರೇನಿಯಾ, ಅತಿಯಾದ ಸಂತೋಷ, ಅತಿಯಾದ ಸಂಶಯ, ವಿಚಿತ್ರವಾಗಿ ವರ್ತಿಸುವುದು ಹಾಗೂ ಉನ್ಮಾದಕ್ಕೆ (ಮೇನಿಯಾ) ಒಳಗಾಗುತ್ತಾರೆ. ಈ ಎಲ್ಲ ಕಾಯಿಲೆಗಳಿಗೂ ಉಚಿತ ಚಿಕಿತ್ಸೆ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಮಾನಸಿಕ ಆರೋಗ್ಯ ವಿಮರ್ಶನಾ ಮಂಡಳಿ ಕಚೇರಿ ಉದ್ಘಾಟನೆ: ಇದೇ ವೇಳೆ ಹಿಮ್ಸ್ ಭೋದಕ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದಲ್ಲಿ ನೂತನವಾಗಿ ಆರಂಭಗೊಂಡಿರುವ ಮಾನಸಿಕ ಆರೊಗ್ಯ ವಿಮರ್ಶನಾ ಮಂಡಳಿಯ ಕಚೇರಿಯನ್ನು ನ್ಯಾಯಾದೀಶೆ ಬಿ.ಎಂ.ಶೈಲಾ ಉದ್ಘಾಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net