

ಕೆ.ಆರ್.ಪೇಟೆ: ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ, ಸಹಕಾರ, ಸಹಬಾಳ್ವೆ, ಭ್ರಾತೃತ್ವ ಮನೋಭಾವನೆ, ಮಾನವೀಯ ಮೌಲ್ಯಗಳು ಮೂಡಲು ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಆರ್‌ಟಿಒ ಅಧಿಕಾರಿ ಮಲ್ಲಿಕಾರ್ಜುನ್ ಹೇಳಿದರು.
ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಸೇವಾ ಯೋಜನೆ ಯುವಜನರಲ್ಲಿ ನಾಯಕತ್ವ ಗುಣ, ಸೇವಾ ಮನೋಭಾವ ಹಾಗೂ ಪರೋಪಕಾರ ಗುಣಗಳನ್ನು ಬೆಳೆಸುತ್ತದೆ. ಇತ್ತೀಚಿನ ದಿನಗಳಲ್ಲಿ ಯುವ ಸಮೂಹದಲ್ಲೇ ಹೆಚ್ಚು ಸಾವುಗಳು ಸಂಭವಿಸುತ್ತಿದೆ. ಅಪಘಾತದಿಂದ ಅವಘಡ ಉಂಟಾಗಿ ಇಡೀ ಸಂಸಾರಗಳು ಕಷ್ಟ ಅನುಭವಿಸುವುದನ್ನು ಕಾಣುತ್ತಿದ್ದೇವೆ. ಆದ್ದರಿಂದ ಬೈಕ್ ಚಾಲನೆ ಮಾಡುವ ಸಮಯದಲ್ಲಿ ಕಡ್ಡಾಯವಾಗಿ ಹೆಲ್ಮೆಟ್ ಬಳಸಬೇಕು. ಮದ್ಯ ಕುಡಿದು ವಾಹನ ಚಲಾಯಿಸಬಾರದು. ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಳ್ಳಬೇಕು. ಪ್ರತಿಯೊಂದು ಜೀವಕ್ಕೆ ಬೆಲೆ ಇರುತ್ತದೆ. ಆದ್ದರಿಂದ ಇವೆಲ್ಲವನ್ನೂ ಪಾಲನೆ ಮಾಡುವ ಮೂಲಕ ಉತ್ತಮ ಜೀವನ ನಡೆಸುವಂತೆ ಮನವಿ ಮಾಡಿದರು.
ರೈತರು, ತಂದೆ, ತಾಯಿ, ಗುರು ಹಿರಿಯರ ಬಗ್ಗೆ ಗೌರವ ಭಕ್ತಿ ಭಾವ ಹೊಂದಬೇಕು. ಯುವಜನರು ಕಷ್ಟಪಟ್ಟು ಶಿಕ್ಷಣ ಪಡೆದು ದೇಶವನ್ನು ಸುಭದ್ರವಾಗಿ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು. ದೇಶ ಪ್ರೇಮ ಹಾಗೂ ಅನ್ಯಾಯದ ವಿರುದ್ಧ ಹೋರಾಟ ನಡೆಸುವ ಮನೋಭಾವನೆ ಮೈಗೂಡಿಸಿಕೊಂಡು ಬದಲಾವಣೆ ದಿಕ್ಕಿನಲ್ಲಿ ಹೆಜ್ಜೆ ಹಾಕಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ್, ಮುಖಂಡರಾದ ನಾಗರಾಜು, ಮಂಜುನಾಥ್, ಉಪನ್ಯಾಸಕ ರಾಯಸಮುದ್ರ ಪದ್ಮನಾಭ್, ಮಂಜುನಾಥ್, ರೈತ ಸಂಘದ ನಾಗರಾಜು, ಗ್ರಾಪಂ ಸದಸ್ಯ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಪ್ರಕಾಶ್, ಆರ್‌ಟಿಒ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜಿಗೆರೆ ಮಹೇಶ್, ಅಭಿಲಾಷ್, ಗ್ರಾಮದ ಮುಖಂಡರು, ಉಪನ್ಯಾಸಕರು, ಸಿಬ್ಬಂದಿ, ಶಿಬಿರಾರ್ಥಿಗಳು ಹಾಜರಿದ್ದರು.