ಮಾನವನ ಅಭ್ಯುದಯ ವಿಜ್ಞಾನದ ಮೂಲ ಆಶಯ

Ghanti
Published on

ಕಲಬುರಗಿ: ಮಾನವ ಕುಲದ ಅಭ್ಯುದಯವೇ ವೈಜ್ಞಾನಿಕ ಸಂಶೋಧನೆಯ ಮೂಲ ಆಶಯ. ವಿಜ್ಞಾನ ಕ್ಷೇತ್ರದಲ್ಲಾಗುತ್ತಿರುವ ಸಂಶೋಧನೆ ಮತ್ತು ಹೊಸ ಅವಿಷ್ಕಾರಗಳನ್ನು ಜಗತ್ತಿನ ಆರೋಗ್ಯಕರ ಬೆಳವಣಿಗೆಗೆ ಪೂರಕವಾಗಿ ಬಳಸಬೇಕಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಪ್ರೊ.ಕೆ.ಲಿಂಗಪ್ಪ ಹೇಳಿದರು.
ಕುಸನೂರು ರಸ್ತೆಯಲ್ಲಿರುವ ಜನರಂಗ ವೇದಿಕೆ ಶನಿವಾರ ಆಯೋಜಿಸಿದ್ದ ಪ್ರಕಾಶ ಗರುಡ ಅನುವಾದಿಸಿರುವ ಉಮೇಶ ಪಾಟೀಲ್ ನಿರ್ದೇಶನದ ನಾನು ಆಲ್ಬರ್ಟ್ ಐನ್‌ಸ್ಟೀನ್ ಎಂಬ ಏಕವ್ಯಕ್ತಿ ನಾಟಕ ಪ್ರದರ್ಶನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಭೌತಶಾಸ್ತçದಲ್ಲಿ ಸಂಶೊಧನೆ ಮಾಡಿ ನೋಬಲ್ ಪ್ರಶಸ್ತಿ ಪಡೆದಿರುವ ಐನ್‌ಸ್ಟೀನ್ ೨೦ನೇ ಶತಮಾನದ ಮಹಾನ್ ವಿಜ್ಞಾನಿ. ಭೌತ ಜಗತ್ತಿಗೆ ಅವರು ನೀಡಿದ ಸಾಪೇಕ್ಷ ಸಿದ್ಧಾಂತ ಮಾನವನ ಸಂವೇದನಾಶೀಲತೆ ಒತ್ತಿ ಹೇಳುತ್ತದೆ ಎಂದರು.
ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಎಸ್.ಎಚ್.ಬಸವಪ್ರಭು ಮಾತನಾಡಿ, ಹಿರಿಯ ಕಲಾವಿದ ಶಂಕ್ರಯ್ಯ ಘಂಟಿಯವರಲ್ಲಿನ ನಟನಾ ಕೌಶಲ ಯುವ ಕಲಾವಿದರಿಗೆ ಪ್ರೇರಣೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ.ಶಿವಗಂಗಾ ರುಮ್ಮ ಮಾತನಾಡಿ, ವಿಜ್ಞಾನವು ಹೊಸದನ್ನು ಹೇಳುವುದರೊಂದಿಗೆ ಅದನ್ನು ಹೇಗೆ ಸಮಾಜದ ಒಳಿತಿಗೆ ಬಳಸಬೇಕು ಎಂಬುದನ್ನು ಸಾದರಪಡಿಸುತ್ತದೆ. ಮೇಧಾವಿ ಐನ್‌ಸ್ಟೀನ್ ರೂಪಿಸಿದ ಸಿದ್ಧಾಂತ ಸಮಾಜ ಅಸ್ಥಿರಗೊಳಿಸುವ ಶಕ್ತಿಗಳನ್ನು ವಿರೋಧಿಸಿ ಮಾನವ ಕಲ್ಯಾಣಕ್ಕಾಗಿ ದುಡಿದವರು. ಅವರ ವೈಯಕ್ತಿಕ ಬದುಕಿನ ವಿಚಾರಗಳನ್ನು ಮೀರಿ ಬೆಳೆದು ಆಧುನಿಕ ಸಮಾಜ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಧಾರವಾಡದ ಕೆಎಲ್‌ಇ ಕಂಪ್ಯೂಟರ್ ವಿಭಾಗದ ಪ್ರಾಧ್ಯಾಪಕ ಡಾ. ಶಶಿಧರ್ ಕುಬ್ಸದ್, ಕೆಎಲ್‌ಇ ಇನ್‌ಸ್ಟಿಟ್ಯೂಟ್‌ನ ಆರ್ಕಿಟೆಕ್ಚರ್ ವಿಭಾಗದ ಪ್ರಾಧ್ಯಾಪಕಿ ಪ್ರಿಯಾಂಕ ಎಸ್.ಇ, ಪ್ರೊ.ಆರ್.ಡಿ.ಮಠದ್, ಹಿರಿಯ ಕಲಾವಿದ ಬಾಬುರಾವ್, ಪ್ರೊ.ಕಿರಣ್ ಗಾಜನೂರು, ಸಮಾಜ ಕಾರ್ಯ ವಿಭಾಗದ ಉಪನ್ಯಾಸಕ ಶ್ರೀನಿವಾಸ್, ಉಪನ್ಯಾಸಕ ಅವಿನಾಶ್ ಬಡಿಗೇರ್, ನಿವೃತ್ತ ಇಂಜಿನಿಯರ್ ಮುದಗಲ್ ವೆಂಕಟೇಶ, ಸಂಶೋಧನಾ ವಿದ್ಯಾರ್ಥಿನಿ ನಯನಾ, ಶಿವಲಿಂಗಯ್ಯ ಘಂಟಿಮಠ ಇತರರು ಇದ್ದರು.
ಆಶಾ ಕಂಠಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕ ಡಾ.ಕೆ.ಎಂ.ಕುಮಾರಸ್ವಾಮಿ ಪ್ರಾರ್ಥಿಸಿ, ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net