ಮಾಧ್ಯಮಗಳು ಶೋಷಿತ ಸಮುದಾಯಗಳ ಪರ

HUN-JULY-7-3(DEED PROGRAMME)
Published on

ಹುಣಸೂರು: ಶೋಷಿತ ಸಮುದಾಯಗಳ ಪರವಾಗಿ ಇಂದಿಗೂ ಮಾಧ್ಯಮಗಳು ನಿಂತಿವೆ ಎಂದು ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ದಲಿತ ಹಿರಿಯ ಹೋರಾಟಗಾರ ಹರಿಹರ ಆನಂದಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಡೀಡ್ ಸಂಸ್ಥೆಯ ಮಾನವ ಸಂಪನ್ಮೂಲ ತರಬೇತಿ ಕೇಂದ್ರದಲ್ಲಿ ಸೋಮವಾರ ಆಯ್ದ ಆದಿವಾಸಿ ವಿದ್ಯಾವಂತ ಯುವಜನರಿಗೆ ನಾಗರಿಕ ಪತ್ರಕರ್ತರಾಗುವ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

70ರ ದಶಕದಲ್ಲಿ ದಲಿತ ಚಳವಳಿ ಆರಂಭಗೊಂಡ ದಿನದಿಂದ ಇಂದಿನವರೆಗೂ ಮಾಧ್ಯಮಗಳು ಶೋಷಿತ ಸಮುದಾಯದ ನೋವು ನಲಿವುಗಳ ಕುರಿತು ನ್ಯಾಯಯುತ ಬೇಡಿಕೆಗಳ ಕುರಿತು ಬೆಂಬಲಿಸುತ್ತಲೇ ಬಂದಿವೆ. ಆದಿವಾಸಿ ಗಿರಿಜನರ ಕುರಿತಾಗಿಯೂ ಮಾಧ್ಯಮ ಆಳುವವರಿಗೆ ಚುರುಕು ಮುಟ್ಟಿಸುತ್ತಿದೆ. ಇದೀಗ ಶೋಷಣೆಗೊಳಗಾಗಿರುವ ಆದಿವಾಸಿಗಳೇ ಮಾಧ್ಯಮದಲ್ಲಿ ಕರ್ತವ್ಯ ನಿರ್ವಹಿಸಲು ಹೊರಟಿರುವುದು ಶ್ಲಾಘನೀಯ. ನೀವು ಅನುಭವಿಸುತ್ತಿರುವ ನೋವು ಅಕ್ಷರಗಳ ಮೂಲಕ, ದೃಶ್ಯಗಳ ಮೂಲಕ ನಾಗರಿಕ ಸಮುದಾಯದಲ್ಲಿ ಕಾಣಿಸಿಕೊಂಡು ಆಡಳಿತಶಾಹಿ ವ್ಯವಸ್ಥೆಯ ಕಣ್ಣು ತೆರೆಸುವಂತಾಗಲಿ ಎಂದು ಆಶಿಸಿದರು.

ಸಾಹಿತಿ ಮರುಡೇಶಮೂರ್ತಿ ಮಾತನಾಡಿ, ಪತ್ರಿಕಾರಂಗಕ್ಕೆ ಬರುವವರು ಬದ್ಧತೆ ಹೊಂದಿರಬೇಕು. ಸಾಹಿತ್ಯ ಹಾಗೂ ಕಂಪ್ಯೂಟರ್ ಕೌಶಲ ಹೊಂದಿರುವ ಅಗತ್ಯವಿದೆ. ಸಮುದಾಯಗಳ ಘನತೆಗೆ ಕುಂದಾಗದಂತೆ ಬರೆಯಬೇಕು, ತುಂಬಾ ಒತ್ತಡದಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಿರಬೇಕು ಎಂದರು.

ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್, ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಮುಖ್ಯಸ್ಥ ಮನೋಹರ್ ದಾಸ್, ಪತ್ರಕರ್ತ ಹನಗೋಡು ನಟರಾಜ್, ಮೋಹನ್ ಮಾತನಾಡಿದರು.

ತರಬೇತಿಗೆ ಆಗಮಿಸಿದ ಆದಿವಾಸಿ ಯುವಕರಿಗೆ ಮನೋಹರ್ ದಾಸ್ ನೋಟ್ ಪ್ಯಾಡ್ ಮತ್ತು ಪೆನ್ ಉಚಿತವಾಗಿ ನೀಡಿದರು.

ಆದಿವಾಸಿ ಜನತಾ ಪಾಲಿಮೆಂಟ್ ಅಧ್ಯಕ್ಷ ಹೆಮ್ಮಿಗೆ ಹರ್ಷ, ಹಿರಿಯರಾದ ಮಾಸ್ತಮ್ಮ, ಸಣ್ಣಮ್ಮ, ಲಕ್ಷ್ಮಮ್ಮ ವಿಠಲ್, ಜಯಪ್ಪ, ಶಿವಣ್ಣ ಹಾಗೂ ಮೈಸೂರು ಮತ್ತು ಕೊಡಗು ಜಿಲ್ಲೆಯ 20ಕ್ಕೂ ಹೆಚ್ಚು ಆದಿವಾಸಿ ಯುವಕ, ಯುವತಿಯರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net