

ವಿಶೇಷ ವರದಿ
ಬಾಗಲಕೋಟೆ: ಜಾತ್ಯಾತೀತ ನಿಲವು, ಪ್ರಗತಿಪರ ಚಿಂತನೆಗಳೊಂದಿಗೆ ತಮ್ಮ ಬರವಣಿಗೆ ಮೂಲಕ ನಾಡಿಗೆ ಸೇವೆ ಸಲ್ಲಿಸುತ್ತಿರುವ ಸನತ್‌ಕುಮಾರ ಬೆಳಗಲಿ ಅವರಿಗೆ ಈ ಸಾರಿ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.
ಮೂಲತಃ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಸನತ್‌ಕುಮಾರ ಬೆಳಗಲಿ ನಾಡಿನ ಹಲವು ದಿನ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪತ್ನಿ ಶಶಿಕಲಾ ಬೆಳಗಲಿ ದಾವನಗೆರೆ ನಗರಸಭೆ ಸದಸ್ಯರಾಗಿದ್ದರು. ರಾಹುಲ್, ಭುಪೇಶ್ ಇಬ್ಬರು ಪುತ್ರರರು ಇದ್ದಾರೆ. ೨೧-೩-೧೯೫೩ ಜನಿಸಿದ ಅವರು ಚಿಕ್ಕ ವಯಸ್ಸಿನಿಂದ ಜಾತ್ಯತೀತ, ಪ್ರಗತಿಪರ ಚಿಂತನೆಗಳತ್ತ ಒಲವು ಹೊಂದಿದವರು. ಸಾಹಿತಿಗಳಾದ ಬಸವರಾಜ ಕಟ್ಟೀಮನಿ, ನಿರಂಜನ, ಜಿ.ರಾಮಕೃಷ್ಣ ಮತ್ತಿತರರ ಪ್ರಭಾವಕ್ಕೆ ಒಳಗಾದವರು.
೧೯೭೫ ರಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸಾವಳಗಿಯಲ್ಲಿ ಓಕಳಿ ಹಬ್ಬದ ನೆಪದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿದ್ದ ಶೋಷಣೆ ಕುರಿತು ಬರೆದ ಷಂಡ ಸಮಾಜದಲ್ಲಿ ದುಶ್ಯಾಸನರ ಕೇಕೆ ಲೇಖನ ಓದುಗರ ವಿಭಾಗದ ಬದಲು ಮುಖಪುಟದಲ್ಲಿ ಪ್ರಕಟವಾಯಿತು. ಆಗ ಖಾದ್ರಿ ಶಾಮಣ್ಣ ಪತ್ರಿಕೆ ಸಂಪಾದಕರು ಮತ್ತು ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿ, ಲೇಖನ ಓದಿದ ಪರಿಣಾಮ ಮುಖ್ಯಮಂತ್ರಿ ಅವರು ಓಕಳಿ ಸಂದರ್ಭದಲ್ಲಿ ಮಹಿಳೆಯರ ಮೇಲೆ ಆಗುತ್ತಿದ್ದ ಶೋಷಣೆ ತಡೆಗಟ್ಟಲು ಆ ಪ್ರದೇಶದಲ್ಲಿ ಓಕಳಿ ನಿಷೇಽಸಿದರು. ನಂತರ ಪತ್ರಿಕಾ ಕ್ಷೇತ್ರದತ್ತ ದಾಪುಗಾಲು ಇಟ್ಟರು.
ಪ್ರಗತಿಪಂಥ ಲೇಖಕರ ಸಂಘ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ೧೯೮೦ ದಶಕದಲ್ಲಿ ಬಂಡಾಯ ಸಾಹಿತ್ಯ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದರು. ೧೯೭೫ರಿಂದ ೪ ದಶಕಗಳ ಕಾಲ ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ, ಗುಜರಾತ್ ಹತ್ಯಾಕಾಂಡ, ಕೋಮು ದಳ್ಳುರಿ, ಬಾಬಾ ಬುಡನಗಿರಿ ವಿವಾದ, ಬ್ರಾಹ್ಮಣ್ಯವಾದಿ ಭಾರತ ಮತ್ತು ದಲಿತ ಭಾರತ ಕೃತಿಗಳನ್ನು ಬರೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ, ಬುದ್ಧ ಪ್ರಶಸ್ತಿ, ಟಿಎಸ್‌ಆರ್ ಪತ್ರಿಕೋದ್ಯಮ ಪ್ರಶಸ್ತಿ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.