

ಹನೂರು: ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ 4ನೇ ದಿನದ ಅಂಗವಾಗಿ ಶುಕ್ರವಾರ ಮಲೆ ಮಹದೇಶ್ವರಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಶಿವರಾತ್ರಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು.
ದೇವರನ್ನು ವಿವಿಧ ಪುಷ್ಪಗಳಿಂದ ಸಿಂಗಾರ ಮಾಡಲಾಗಿತ್ತಲ್ಲದೆ, ದೇಗುಲವನ್ನು ತಳಿರು, ತೋರಣದಿಂದ ಸಿಂಗಾರ ಮಾಡಲಾಗಿತ್ತು. ಬೆಳಗಿನ ಜಾವ 3 ಗಂಟೆಯಿಂದ 6.30ರವರೆಗೆ ಸ್ವಾಮಿಗೆ ಪ್ರಥಮ ಹಾಗೂ ದ್ವಿತೀಯ ವಿಶೇಷ ಪೂಜೆ ನೆರವೇರಿಸಲಾಯಿತು.
ಅಮಾವಾಸ್ಯೆ ಹಿನ್ನೆಲೆಯಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಬೆಳಗಿನ ಜಾವ ಪ್ರಥಮ ಹಾಗೂ ದ್ವಿತೀಯ ವಿಶೇಷ ಪೂಜೆ ನೆರವೇರಿಸಲಾಯಿತು. ಉಪವಾಸವಿದ್ದ ಬೇಡಗಂಪಣ ಸರದಿ ಅರ್ಚಕರು ಛತ್ರಿ, ಚಾಮರ, ವಾದ್ಯಮೇಳದೊಂದಿಗೆ ದೇಗುಲ ಸಮೀಪದ ನಂದನವನದ ಮಜ್ಜನ ಬಾವಿಗೆ ತೆರಳಿ ಅಗ್ರೋದಕ ಹಾಗೂ ಬಾಯಿಗೆ ಬಟ್ಟೆ ಕಟ್ಟಿಕೊಂಡು ಕರೆದ ಹಾಲಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಮೆರವಣಿಗೆಯ ಮೂಲಕ ದೇಗುಲಕ್ಕೆ ತಂದರು. ಸ್ವಾಮಿಗೆ ಸಂಕಲ್ಪಾಧಿ, ಏಕವಾರು ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಶತನಾಮ ಬಿಲ್ವಾರ್ಚನೆ, ಎಳನೀರು, ಜೇನುತುಪ್ಪ, ಮೊಸರು, ಸಕ್ಕರೆ, ಖರ್ಜೂರ, ದ್ರಾಕ್ಷಿ ಹಾಗೂ ಹಾಲಿನ ಅಭಿಷೇಕವನ್ನು ನೆರವೇರಿಸಿದರು.
2ನೇ ಅಭಿಷೇಕದ ವಿಶೇಷ ಪೂಜೆಯಲ್ಲಿ ಮಾದಪ್ಪನಿಗೆ ಅಭಿಷೇಕ ಅರ್ಚನೆ, ಏಕವಾರು ರುದ್ರಾಭಿಷೇಕ, ಸಂಕಲ್ಪ ಬಿಲ್ವಾರ್ಚನೆ ನೆರವೇರಿಸಲಾಯಿತು. ನವರತ್ನ ಕೀರಿಟಧಾರಣೆಯೊಂದಿಗೆ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ಧೂಪ, ದೀಪದಾರತಿ ಹಾಗೂ ಮಹಾ ಮಂಗಳಾರತಿ ಬೆಳಗಿಸಿದರು. ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು.
ಮೊಳಗಿದ ಜಯಘೋಷ: ಶುಕ್ರವಾರ ಶ್ರೀಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಹುಲಿ, ರುದ್ರಾಕ್ಷಿ ಹಾಗೂ ಬಸವ ವಾಹನವನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸುವುದರ ಮೂಲಕ ಉತ್ಸವ ಸೇವೆಯಲ್ಲಿ ಭಾಗಿಯಾಗಿದ್ದರು. ಬೆಳಗ್ಗೆ 8.15ರಲ್ಲಿ ಜರುಗಿದ ಬೆಳ್ಳಿ ತೇರಿನ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಹರಕೆ ಹೊತ್ತ ಭಕ್ತರು ದಂಡಿನ ಕೋಲು ಹೊತ್ತು ಉತ್ಸವ ಮೂರ್ತಿಗಳಿಗೆ ಧನ, ಧಾನ್ಯ ಸೇರಿದಂತೆ ಇನ್ನಿತರ ವಸ್ತುಗಳನ್ನು ಎಸೆದು ಪುನೀತರಾದರು. ಈ ವೇಳೆ ಭಕ್ತರು ಜೈ ಮಹತ್ ಮಲೆಯಾ, ಉಘೇ ಮಾದಪ್ಪ ಉಘೇ.. ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.
ಕೆಲ ಭಕ್ತರು ಅಂತರಗಂಗೆಯ ಕಲ್ಯಾಣಿಯಲ್ಲಿ ಪುಣ್ಯಸ್ನಾನ ಮಾಡಿ ಮುಡಿಸೇವೆ, ಉರುಳುಸೇವೆ, ಪಂಜಿನಸೇವೆ ಹಾಗೂ ರಜ ಹೊಡೆಯುವ ಸೇವಾ ಕಾರ್ಯಗಳಲ್ಲಿ ಭಾಗಿಯಾಗುವ ಮೂಲಕ ಹರಕೆ ತೀರಿಸಿದರು.
ಪ್ರಾಧಿಕಾರದ ವತಿಯಿಂದ ಅಂಗವಿಕಲರಿಗೆ, ವೃದ್ಧರಿಗೆ ಪ್ರತ್ಯೇಕ ಕೌಂಟರ್ ತೆರೆದು ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಿಸಿಲಿನ ತಾಪಮಾನ ಹೆಚ್ಚಾದ ಹಿನ್ನೆಲೆಯಲ್ಲಿ ಆಗಾಗ್ಗೆ ನೀರನ್ನು ಸಿಂಪಡಿಸುವ ಮೂಲಕ ಭಕ್ತರ ಉರುಳು ಸೇವೆಗೆ ಅನುಕೂಲ ಕಲ್ಪಿಸಲಾಗಿತ್ತು. ದಾಸೋಹ ವ್ಯವಸ್ಥೆ ನಿರಂತರವಾಗಿತ್ತು.
ಪ್ರಸಾದ ಗುಣಮಟ್ಟ ಪರಿಶೀಲನೆ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ಅವರು ಶುಕ್ರವಾರ ದಾಸೋಹ ಭವನದಲ್ಲಿ ಪ್ರಸಾದದ ರುಚಿಯನ್ನು ಸವಿದು ಗುಣಮಟ್ಟ ಪರಿಶೀಲಿಸಿದರು. ದೇವರ ದರ್ಶನ, ಪರ ಮಾಡುವ ಸ್ಥಳ, ಅಂತರಗಂಗೆ, ದೇಗುಲದ ಆವರಣ ಸೇರಿದಂತೆ ಜನಸಂದಣಿ ಸ್ಥಳಗಳಿಗೆ ಭೇಟಿ ನೀಡಿ ಮೂಲ ಸೌಕರ್ಯದ ಬಗ್ಗೆ ಸಮಸ್ಯೆಯಾಗದಂತೆ ಸಿಬ್ಬಂದಿಗೆ ಸೂಚಿಸಿದರು.
ಪಂಕ್ತಿಸೇವೆ, ಕಡಲೆ, ಕೊಬ್ಬರಿ ಹಂಚಿಕೆ: ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಮ.ಬೆಟ್ಟದಲ್ಲಿ ಬೀಡು ಬಿಟ್ಟಿದ್ದು, ಇದರಲ್ಲಿ ಹರಕೆ ಹೊತ್ತ ಭಕ್ತರು ಪರ (ಅನ್ನ ಸಂತರ್ಪಣೆ) ಸೇವೆಯನ್ನು ನಡೆಸಿದರೆ, ಜಿಲ್ಲೆಯ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ಗ್ರಾಮಸ್ಥರು ಒಂದೆಡೆ ಸೇರಿ ಪ್ರತಿ ಕುಟುಂಬದಿಂದ ಹಣ ಸಂಗ್ರಹಿಸಿ ಅಡುಗೆ ತಯಾರಿಸಿ ಸಹಭೋಜನ ಸವಿದು ಪಂಕ್ತಿಸೇವೆ ನೆರವೇರಿಸಿದರು. ಸಂಘ-ಸಂಸ್ಥೆಗಳು, ದಾನಿಗಳು ಅಲ್ಲಲ್ಲಿ ಅನ್ನಸಂತರ್ಪಣೆ ಮಾಡುತ್ತಿದ್ದು ಶುಕ್ರವಾರ ಕಂಡುಬಂತು. ಇತ್ತ ಕೆಲ ಗ್ರಾಮಸ್ಥರು ಕಡಲೆ, ಕೊಬ್ಬರಿ ಹಾಗೂ ಬೆಲ್ಲದ ಮಿಶ್ರಣಕ್ಕೆ ಪೂಜೆ ಸಲ್ಲಿಸಿ ಜತೆಯಲ್ಲಿ ಆಗಮಿಸಿದ್ದವರಿಗೆ ಹಂಚಿದರು.
ಇಂದು ಮಹಾರಥೋತ್ಸವ: ಮಾ.1ರಂದು ಬೆಳಗ್ಗೆ 8.10ರಿಂದ 8.45 ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಮಹಾರಥೋತ್ಸವ ಜರುಗಲಿದೆ. ಈಗಾಗಲೇ ತೇರನ್ನು ಬಣ್ಣ ಬಣ್ಣದ ಬಟ್ಟೆಗಳಿಂದ ಸಿಂಗರಿಸಲಾಗಿದೆ. ಮಹಾ ರಥೋತ್ಸವಕ್ಕೆ ಹಾಗೂ ರಾತ್ರಿ ದೇಗುಲದಲ್ಲಿ ಅಭಿಷೇಕ ಪೂಜೆ ಮುಗಿದ ಬಳಿಕ ನಡೆಯುವ ಕೊಂಡೋತ್ಸವಕ್ಕೆ ಪ್ರಾಧಿಕಾರದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.