

ಹಾವೇರಿ: ಸಮಾಜಕ್ಕೆ ಮಾರಕವಾಗಿರುವ ಮಾದಕ ದ್ರವ್ಯಗಳ ಸೇವನೆ, ಮಾರಾಟದ ವಿರುದ್ಧ ಯುದ್ಧದ ಮಾದರಿಯಲ್ಲಿ ಹೋರಾಟ ಮಾಡಬೇಕಾಗಿದೆ. ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಜಾಗೃತಿ ಕಾರ್ಯಕ್ರಮಗಳ ಮೂಲಕ ಮಾದಕ ವಸ್ತುಗಳ ತೊಡೆಯಲು ಪಣತೊಟ್ಟಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.
ಮಾದಕ ವಸ್ತುಗಳ ಮೇಲೆ ಯುದ್ಧ ಎಂಬ ಘೊಷಣೆಯೊಂದಿಗೆ ನಗರದ ಸಿದ್ದಪ್ಪ ಹೊಸಮನಿ ವೃತ್ತದಲ್ಲಿ ಸೋಮವಾರ ಆಯೋಜಿಸಿದ್ದ ಜಾಗೃತಿ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಂತರ ಡಿವೈಎಸ್ಪಿ ವಿಜಯಕುಮಾರ ಸಂತೋಷ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೈಕ್ ಹಾಗೂ ಜೀಪ್ಗಳಲ್ಲಿ ನಗರ ಸಂಚಾರ ಕೈಗೊಂಡರು. ಯುವಜನರಿಗೆ ಮಾರಕವಾಗಿರುವ ಮಾದಕ ವಸ್ತುಗಳ ಸೇವನೆಯನ್ನು ಕೈಬಿಡಿ-ಮಾದಕ ವಸ್ತುಗಳ ಪತ್ತೆಗಾಗಿ ಪೊಲೀಸರೊಂದಿಗೆ ಕೈಜೋಡಿಸಿ ಎಂಬ ಘೊಷವಾಕ್ಯದೊಂದಿಗೆ ಜಾಥಾ ನಡೆಸಿದರು.
ಇದೇ ಸಂದರ್ಭದಲ್ಲಿ ಕೋವಿಡ್ ಸೋಂಕು ತಡೆಗೆ ಕಡ್ಡಾಯವಾಗಿ ಸಾರ್ವಜನಿಕವಾಗಿ ಓಡಾಡುವಾಗ ಮಾಸ್ಕ್ಗಳನ್ನು ಧರಿಸಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ನಿಯಮಿತವಾಗಿ ಕೈ-ಬಾಯಿ ಸ್ವಚ್ಛತೆ ಹಾಗೂ ಸ್ಯಾನಿಟೈಸರ್ ಮಾಡಿಕೊಳ್ಳುವಂತೆ ಅರಿವು ಮೂಡಿಸಿದರು. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ರಕ್ಷಣೆಗಾಗಿ, ಪೊಲೀಸರ ಸಂಪರ್ಕಕ್ಕಾಗಿ ಹೊಸದಾಗಿ ಜಾರಿಗೆ ಬಂದಿರುವ 112 ಸಹಾಯವಾಣಿ ಸಂಖ್ಯೆ ಕುರಿತು ಮಾಹಿತಿ ನೀಡಿದರು.
ಜಾಥಾದಲ್ಲಿ ಸಿಪಿಐಗಳಾದ ಟಿ. ಮಂಜಣ್ಣ, ಕಾವ್ಯ ಕೆ., ಪಿಎಸ್ಐ ಮಂಜುನಾಥ ಬಿ.ಎನ್. ಇತರರಿದ್ದರು.