ಮಾದಕ ವಸ್ತು ಸಾಗಣೆ ಪ್ರಕರಣಕ್ಕೆ ಆತ್ಮಹತ್ಯೆ ತಳಕು

18 KWR-Chandrahas Dayanand gunaga
Published on

ಮಾದಕ ವಸ್ತು, ಬ್ರೌನ್ ಶುಗರ್, ಪೊಲೀಸ್, ಬಂಧಿತರು

ಕಾರವಾರ: ಕಳೆದ ಕೆಲ ತಿಂಗಳ ಹಿಂದೆ ಸಿದ್ದಾಪುರ ಮಾವಿನಗುಂಡಿಯಲ್ಲಿ ನಡೆದ ಆತ್ಮಹತ್ಯೆ ಪ್ರಕರಣಕ್ಕೂ ಅಂಕೋಲಾದಲ್ಲಿ ಇತ್ತೀಚೆಗೆ ಪತ್ತೆಯಾದ ಮಾದಕ ವಸ್ತು ಸಾಗಣೆ ಪ್ರಕರಣಕ್ಕೂ ಸಂಬಂಧ ಕೇಳಿ ಬಂದಿದೆ.

ಸಿದ್ದಾಪುರದಲ್ಲಿ ಬಾಡಿಗೆ ಮನೆಯಲ್ಲಿ ಇದ್ದ ವ್ಯಕ್ತಿಯೊಬ್ಬ ತನ್ನಿಂದ ಸಾಲ ಪಡೆದಿದ್ದ. ಸಾಲದ ಹಣ ಕೇಳಲು ಹೋದಾಗ ತನ್ನ ಬಳಿ ಹಣವಿಲ್ಲ , ಈ ವಸ್ತು ಮಾರಿ ಹಣ ಮಾಡಿಕೊಳ್ಳಿ ಎಂದು ಕೊಟ್ಟಿದ್ದ . ಆದರೆ, ಕೆಲ ದಿನಗಳ ನಂತರ ಆತ ಮಾವಿನಗುಂಡಿಯಲ್ಲಿ ಆತ್ಮಹತ್ಯೆಗೆ ಶರಣಾದ ಎಂದು ಬಂಧಿತರು ಹೇಳುತ್ತಿದ್ದಾರೆ.

ಜಿಲ್ಲೆಯಲ್ಲಿ ಪತ್ತೆಯಾದ ಅತಿ ದೊಡ್ಡ ಮಾದಕ ದ್ರವ್ಯ ಪ್ರಕರಣ ಇದಾಗಿರುವುದರಿಂದ ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸಿದ್ದು, ವ್ಯಾಪಾರದ ಜಾಲ ಭೇದಿಸುವತ್ತ ತನಿಖೆ ಆರಂಭಿಸಿದ್ದಾರೆ.

ಬಂಧಿತರು ಪ್ರಕರಣ ದಿಕ್ಕು ತಪ್ಪಿಸಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆಯೇ ಅಥವಾ ಸತ್ಯವೇ ಎಂಬುದನ್ನು ಖಚಿತ ಮಾಡಿಕೊಳ್ಳುವ ನಿಟ್ಟಿನಲ್ಲಿ ಅಂಕೋಲಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಆತಂಕ: ಅತ್ಯಂತ ಸರಳ ವ್ಯಕ್ತಿಯಂತೆ ಇದ್ದ ಪುರೋಹಿತ ಪ್ರವೀಣ ಭಟ್ ಜತೆ ಸಿದ್ದಾಪುರದ ಹಲವು ಪುರೋಹಿತರು ಸಂಪರ್ಕದಲ್ಲಿದ್ದರು. ಅಲ್ಲದೆ, ಶಿಷ್ಯವರ್ಗದ ಕುಟುಂಬಗಳ ಜತೆಯೂ ಪ್ರವೀಣ ಭಟ್ ಉತ್ತಮ ಒಡನಾಟ ಹೊಂದಿದ್ದರು. ಆ ಎಲ್ಲರಿಗೂ ಪ್ರವೀಣ ಬಂಧನದ ಸುದ್ದಿ ಆಘಾತ, ಅಚ್ಚರಿ, ಆತಂಕಕ್ಕೆ ಕಾರಣವಾಗಿದೆ. ಆತ ಹೀಗೆಲ್ಲ ಇದ್ದ ಎಂಬುದೇ ಗೊತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸುವವರು ಹಲವರಾದರೆ, ಆತನಿಗೆ ಪೌರೋಹಿತ್ಯದ ವಿಚಾರವಾಗಿ ಹಲವು ಬಾರಿ ಕರೆ ಮಾಡಿದ್ದೆ, ನನಗೆ ಸಮಸ್ಯೆ ಉಂಟಾದೀತೇ ಎಂದು ಆತಂಕಪಡುವವರೂ ಇದ್ದಾರೆ.

ನ್ಯಾಯಾಂಗ ಬಂಧನಕ್ಕೆ: ಬ್ರೌನ್ ಶುಗರ್ ಮಾರಾಟ ಜಾಲದಲ್ಲಿ ಸಿಕ್ಕಿ ಬಿದ್ದ ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಂಕೋಲಾ ಬಾಳೆಗುಳಿ ಸಮೀಪ ಎರಡು ಕಾರುಗಳಲ್ಲಿ ಇಟ್ಟಿದ್ದ 2 ಕೋಟಿ 68 ಲಕ್ಷ ರೂ. ಮೌಲ್ಯದ 3 ಪ್ಯಾಕೆಟ್ 2ಕೆಜಿ 680 ಗ್ರಾಂ ಬ್ರೌನ್​ಶುಗರ್ ಹಾಗೂ 600 ಗ್ರಾಂ ತೂಕದ ಯೂರಿಯಾ ಮಾದರಿಯ ವಸ್ತುಗಳನ್ನು ಡಿಸಿಐಬಿ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದರು.

ಅಂಕೋಲಾ ಕಲ್ಲೇಶ್ವರದ ನಾರಾಯಣ ರಾಮಕೃಷ್ಣ ಭಾಗ್ವತ(35), ಚಂದ್ರಹಾಸ ದಯಾನಂದ ಗುನಗಾ(29),ಸಿದ್ದಾಪುರ ತಾಲೂಕಿನ ಕ್ಯಾದಗಿ ಹೂವಿನಮನೆಯ ವೀರಭದ್ರ ಸುಬ್ರಾಯ ಹೆಗಡೆ(43), ಸಿದ್ದಾಪುರ ಹಳ್ಳಿ ಬೈಲಿನ ಪುರೋಹಿತ ಪ್ರವೀಣ ಮಂಜುನಾಥ ಭಟ್(30). ಬಂಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net