

ರಾಣೆಬೆನ್ನೂರ: ತಾಲೂಕಿನ ಚಂದಾಪುರ ಗ್ರಾಮದ ದೇವೇಂದ್ರಪ್ಪ ಗರ್ಭಗುಡಿ ಎಂಬುವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಔಷಧಕ್ಕಾಗಿ ಪರದಾಡುವಂತಾಗಿದೆ.
ಕಳೆದ ಎರಡು ವರ್ಷದಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ದೇವೇಂದ್ರಪ್ಪ ಗರ್ಭಗುಡಿ, ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ವೈದ್ಯರು ಎರಡು ವರ್ಷದವರೆಗೆ ನಿತ್ಯವೂ ಒಂದು ‘ಇಮಾಥಿನಿಬ್ 400 ಎಂಜಿ’ ಮಾತ್ರೆ ಸೇವಿಸಿಲು ಸೂಚಿಸಿದ್ದರು. ದೇವೇಂದ್ರಪ್ಪ ಪ್ರತಿ ತಿಂಗಳು ರೈಲಿನಲ್ಲಿ ಬೆಂಗಳೂರಿಗೆ ತೆರಳಿ, ಮಾತ್ರೆ ತೆಗೆದುಕೊಂಡು ಬರುತ್ತಿದ್ದರು. ಆದರೀಗ ಲಾಕ್ಡೌನ್ ಘೊಷಣೆಯಾಗಿದ್ದರಿಂದ ದೇವೇಂದ್ರಪ್ಪ ಬೆಂಗಳೂರಿಗೆ ತೆರಳಿ ಔಷಧ ತರುವ ಸ್ಥಿತಿಯಲ್ಲಿಲ್ಲ. ‘ಇಮಾಥಿನಿಬ್ 400 ಎಂಜಿ’ ಮಾತ್ರೆ ಕಿದ್ವಾಯಿ ಆಸ್ಪತ್ರೆಯಲ್ಲಿ ಮಾತ್ರ ಸಿಗುತ್ತದೆ.
ದೇವೇಂದ್ರಪ್ಪ ಕಡುಬಡವನಾಗಿದ್ದು, ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮಕ್ಕಳಿಬ್ಬರು ಇನ್ನೂ ಶಾಲಾ ಹಂತದಲ್ಲಿದ್ದಾರೆ. ಆದ್ದರಿಂದ ಆತನಿಗೆ ತಹಸೀಲ್ದಾರರು ಪಾಸ್ ವ್ಯವಸ್ಥೆ ಮಾಡಿಕೊಟ್ಟರೂ, ಆತ ಬಾಡಿಗೆ ವಾಹನ ಮಾಡಿಕೊಂಡು ಹೋಗಲಾಗದ ಸ್ಥಿತಿಯಲ್ಲಿದ್ದಾನೆ. ಮಾತ್ರೆ ಖಾಲಿಯಾಗಿ 6 ದಿನ ಕಳೆದಿದೆ. ಆರೋಗ್ಯದಲ್ಲಿ ಏರುಪೇರು ಕಾಣಿಸುತ್ತಿದೆ. ಆದ್ದರಿಂದ ತಮಗೆ ಯಾರಾದರೂ ಮಾತ್ರೆ ತರಿಸಿಕೊಡುವ ಮೂಲಕ ಸಹಾಯ ಮಾಡಿದರೆ, ಅನುಕೂಲವಾಗುತ್ತದೆ ಎಂದು ದೇವೇಂದ್ರಪ್ಪ ‘ವಿಜಯವಾಣಿ’ ಎದುರು ಮನವಿ ಮಾಡಿಕೊಂಡರು.