

ಬಾಗಲಕೋಟೆ: ಪ್ರತಿಯೊಬ್ಬ ತನ್ನ ಪ್ರದೇಶದ ಮಾತೃ ಭಾಷೆಯನ್ನು ಗೌರವಿಸಬೇಕು. ಸಂಸ್ಕೃತಿಯ ಜೀವಾಳವೇ ಮಾತೃಭಾಷೆ ಡಾ. ಬಸವರಾಜ ಕುಂಬಾರ ಹೇಳಿದರು.
ನಗರದ ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಹಾಗೂ ಸಸ್ಯಶಾಸ್ತ್ರ ಸ್ನಾತಕೋತ್ತರ ವಿಭಾಗಗಳಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಕರ್ನಾಟಕದ ಸಹಬಾಳ್ವೆ, ಸಹಧರ್ಮ, ಐಕ್ಯತೆ ಜಗತ್ತಿಗೆ ಮಾದರಿ. ಮಾತೃಭಾಷೆಯಿಂದ ವ್ಯಕ್ತಿತ್ವ ವಿಕಸನವಾಗತ್ತದೆ. ಮಗುವಿನ ಸಾಮಾಜೀಕರಣದಲ್ಲಿಯೂ ಕೂಡಾ ಮಾತೃ ಭಾಷೆ ಮಹತ್ವದ ಪಾತ್ರ ವಹಿಸುತ್ತದೆ. ಮಾತೃ ಭಾಷೆಯಲ್ಲಿಯೇ ವ್ಯಕ್ತಿ ಸಾಧನೆ ಮಾಡಲು ಸಾಧ್ಯ. ಪ್ರಾಚೀನ ಕಾಲದಿಂದಲೂ ವಿಜ್ಞಾನ, ತಂತ್ರಜ್ಞಾನ, ಕಲೆ ಸಾಹಿತ್ಯ ಕ್ಷೇತ್ರದಲ್ಲಿ ಮಾತೃ ಭಾಷೆ ಪಾತ್ರ ಹಿರಿದಾಗಿದೆ ಎಂದರು.
ಪ್ರಾಚಾರ್ಯ ಎಸ್.ಜೆ ಒಡೆಯರ ಮಾತನಾಡಿ, ಮಾತೃಭಾಷೆ ಸೃಜನಶೀಲತೆಯನ್ನು ಬೆಳೆಸುತ್ತದೆ. ಪ್ರತಿಯೊಬ್ಬರು ವ್ಯವಹಾರಿಕವಾಗಿ ಯಾವುದೇ ಭಾಷೆ ಬಳಸಿದರೂ ತನ್ನ ಮಾತೃಭಾಷಾ ಅಭಿಮಾನ ಎಂದೂ ಕಳೆದುಕೊಳ್ಳಬಾರದು ಎಂದರು.
ನೀಲಾಂಬಿಕಾ ಅಂಗಡಿ ಕನ್ನಡ ಮಾತೃ ಭಾಷೆಯ ಕುರಿತು ಮಾತನಾಡಿದರು. ಡಾ.ಜಿ.ಐ.ನಂದಿಕೋಲಮಠ, ಎಸ್.ಕೆ.ಹಿರೇಮಠ, ಪಿ.ಕೆ. ಚೌಗುಲಾ, ಡಾ.ಅವಿತಾ ಮಾರಿಹಾಳ ಉಪಸ್ಥಿತರಿದ್ದರು.