

ಅರಸೀಕೆರೆ ಗ್ರಾಮಾಂತರ: ಮೂಗುತಿ ಸುಂದರಿ ಮಾಡಾಳು ಗೌರಮ್ಮನ ದರ್ಶನ ಭಾಗ್ಯದಿಂದಲೇ ಜನ್ಮ ಜನ್ಮದ ಪಾಪ ವಿಮೋಚನೆ ಜೊತೆಗೆ ಮೋಕ್ಷ ಸಿಗಲಿದೆ ಎಂದು ಹಾರನಹಳ್ಳಿ ಕೋಡಿ ಮಠದ ಡಾ.ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಮಾಡಾಳು ಗೌರಮ್ಮ ದೇವಾಲಯದ ಆವರಣದಲ್ಲಿ ಶ್ರೀಮಠದಿಂದ ಆಯೋಜಿಸಿದ್ದ ಲಿಂಗೈಕ್ಯ ಶಿವಲಿಂಗಜ್ಜಯ್ಯ ಅವರ 138ನೇ ಸಂಸ್ಮರಣೋತ್ಸವ ಹಾಗೂ ಧಾರ್ಮಿಕ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಮಾಡಾಳು ಗೌರಮ್ಮ ತನ್ನ ಮಹಿಮೆ, ಪವಾಡದಿಂದಲೇ ನಾಡಿನಾದ್ಯಂತ ಅಪಾರ ಭಕ್ತರನ್ನು ಹೊಂದಿದ್ದಾಳೆ. ಇದೀಗ ತಾಯಿಯ ಹೆಸರಿನಲ್ಲಿ ಶ್ರೀಮಠದಿಂದ ನಿರ್ಮಿಸುತ್ತಿರುವ ದೇವಾಲಯ ಸಹ ಮುಂದಿನ ದಿನಗಳಲ್ಲಿ ಶಕ್ತಿ ಪೀಠವಾಗಿ ಹೆಸರುವಾಸಿಯಾಗಲಿದೆ ಎಂದರು.
ಶಿವಲಿಂಗಜ್ಜಯ್ಯ ಅವರು ನೂರು ಕೋಟಿ ಜಪಮಾಡಿ ಮೂಗುತಿ ಸಿದ್ಧಿಸಿಕೊಂಡು ಮಾಡಾಳು ಗೌರಮ್ಮನಿಗೆ ತೊಡಿಸಿದ್ದರು. ಹಾಗಾಗಿ ಮಾಡಾಳು ಗೌರಮ್ಮ ಮೂಗುತಿ ಗೌರಮ್ಮ ಎಂದೇ ಪ್ರಸಿದ್ಧಿಯಾಗಿದ್ದು, ಈ ದೇವಿಯ ಮೂಗುತಿ ದರ್ಶನ ಭಾಗ್ಯದಿಂದಲೇ ಮುಕ್ತಿ ದೊರೆಯುತ್ತದೆ ಎಂದು ಸ್ವಾಮೀಜಿ ಹೇಳಿದರು.
ಬೆಕ್ಕಿನ ಕಲ್ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ದೇಶಾದ್ಯಂತ ಹಲವು ದೇವಿಯರ ಪ್ರಸಿದ್ಧ ಶಕ್ತಿ ಕ್ಷೇತ್ರ ಇರುವಂತೆಯೇ ಮಾಡಾಳು ಗೌರಮ್ಮ ದೇವಿಯ ಕ್ಷೇತ್ರವೂ ಮುಂದಿನ ದಿನಗಳಲ್ಲಿ ನಾಡಿನ ಜನತೆಯ ಆರಾಧ್ಯ ದೈವ ಆಗಲಿದೆ. ಕೋಡಿ ಮಠದ ಶಕ್ತಿಯೂ ಇಲ್ಲಿ ಸಮ್ಮಿಲನ ಆಗಿರುವುದರಿಂದ ಇದರ ಕೀರ್ತಿ ನಾಡಿನ ಉದ್ದಗಲಕ್ಕೂ ಬೆಳಗುವುದರಲ್ಲಿ ಸಂದೇಹವಿಲ್ಲ ಎಂದರು.
ಮನುಷ್ಯ ಹಣ, ಅಧಿಕಾರದ ಆಸೆಯ ಹಿಂದೆ ಓಡದೆ, ಸತ್ಯ ಧರ್ಮ, ಪ್ರಾಮಾಣಿಕತೆಯಿಂದ ನಡೆದುಕೊಳ್ಳುವ ಮೂಲಕ ಬಸವಣ್ಣ ಹೇಳಿದಂತೆ ಕಾಯಕದಲ್ಲಿ ಕೈಲಾಸ ಕಾಣಬೇಕು. ಅಂತಹ ಮನುಷ್ಯನ ಬದುಕು ಜನ ಮಾತ್ರವಲ್ಲ, ಜನಾರ್ಧನನೂ ಮೆಚ್ಚುವಂತಿರುತ್ತದೆ ಎಂದು ಹೇಳಿದರು.
ಚಿತ್ರನಟ ಎಸ್.ದೊಡ್ಡಣ್ಣ ಮಾತನಾಡಿ, ಶಿವ ನಾದಪ್ರಿಯನೂ ಅಲ್ಲ, ವೇದ ಪ್ರಿಯನೂ ಅಲ್ಲ. ಅವನು ಭಕ್ತಿ ಪ್ರಿಯ. ಅವನನ್ನು ಒಲಿಸಿಕೊಳ್ಳಲು ಶ್ರದ್ಧಾ, ಭಕ್ತಿಯಿಂದ ಮಾತ್ರ ಸಾಧ್ಯ. ಹರಿಹರರೂ ಸಹ ಬದಲಿಸಲಾಗದ ಹಣೆ ಬರಹವನ್ನು ಹಣೆಯ ಮೇಲೆ ವಿಭೂತಿ ಧರಿಸುವುದರಿಂದ ಹಣೆ ಬರಹ ಬದಲಿಸುವ ಶಕ್ತಿ ಇದೆ. ಆದ್ದರಿಂದ ಹಣೆಯ ಮೇಲೆ ವಿಭೂತಿ ಧರಿಸುವುದನ್ನು ಮಕ್ಕಳಿರಲಿ, ದೊಡ್ಡವರಲ್ಲೂ ಕಾಣದಿರುವುದು ವಿಷಾದನೀಯ. ವಿಭೂತಿಗಟ್ಟಿ ಹಣೆ ಮೇಲೆ ಬಳಿಯುವ ಸಂಪ್ರದಾಯವನ್ನು ಮಾತೆಯರು ಪಾಲಿಸಿ, ತಮ್ಮ ಮಕ್ಕಳಿಗೂ ಹೇಳಿಕೊಡಬೇಕೆಂದರು.
ಕೋಡಿ ಮಠದ ಉತ್ತರಾಧಿಕಾರಿ ಚೇತನ್ ಮರಿದೇವರು, ಮಾಡಾಳು ವಿರಕ್ತ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಕೋಳಗುಂದ ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ, ಕೆ.ಬಿದಿರೆ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಮೂರು ಕಳಶ ಮಠದ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ, ದೊಡ್ಡಮೇಟಿಕುರ್ಕೆ ವಿರಕ್ತ ಮಠದ ಶಶಿಶೇಖರ್ ಸ್ವಾಮೀಜಿ, ಕುಪ್ಪೂರು ಗದ್ದಿಗೆ ಮಠದ ತೇಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ದೊಡ್ಡಗುಣಿ ಹಿರೇಮಠದ ಶ್ರೀ ರೇವಣ ಸಿದ್ದೇಶ್ವರ ಸ್ವಾಮೀಜಿ ಇದ್ದರು.
ದೇವಾಲಯ ಆವರಣದಲ್ಲಿ ಶಿವಲಿಂಗಜ್ಜಯ್ಯ ಸ್ವಾಮೀಜಿ ಅವರ ಭಾವಚಿತ್ರವನ್ನು ವ್ರತ ಮಂಟಪದಲ್ಲಿ ಸ್ಥಾಪಿಸಿ ರಥೋತ್ಸವ ಮಾಡಲಾಯಿತು. ಶ್ರೀ ಮೂಲ ಗೌರಮ್ಮ ಟ್ರಸ್ಟ್ ಸಂಚಾಲಕ ನಟರಾಜ್, ಶಿವಲಿಂಗಪ್ಪ, ಸೋಮಶೇಖರ್, ದಾಸಪ್ಪ, ಚಂದ್ರಣ್ಣ, ಕೊಡ್ಲಿ ಬಸವರಾಜ್, ಕೋಡಿ ಮಠದ ಶಾಲೆಯ ಲೋಕೇಶ್, ನಟರಾಜ್, ಶಿವು ಭಾಗವಹಿಸಿದ್ದರು. ಕುಮಾರಿ ಮನ್ವಿತಾ ಭರತ ನಾಟ್ಯ, ರಾಂಪುರ ಭಕ್ತರಿಂದ ಭಜನಾ ಕಾರ್ಯಕ್ರಮ ನಡೆಯಿತು.